ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಎಎಸ್‌ಐಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಠಾಣೆಯೊಳಗೇ ಆಚರಿಸಿಕೊಂಡಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ. ಠಾಣೆಯಲ್ಲಿ ನಡೆದ ಈ ಬರ್ತ್‌ಡೇ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಮತ್ತೆ ಶಿಸ್ತು ಪಾಲನೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಸ್‌ಐ ಸೋಮಶೇಖರ್ ಅವರ ಹುಟ್ಟುಹಬ್ಬವನ್ನು ಠಾಣೆಯಲ್ಲೇ ಆಚರಿಸಲಾಗಿದೆ ಎನ್ನಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಜನ್ಮದಿನ ಸೇರಿದಂತೆ ವೈಯಕ್ತಿಕ ಆಚರಣೆಗಳನ್ನು ನಡೆಸಬಾರದು ಎಂದು ಹಿರಿಯ ಅಧಿಕಾರಿಗಳು ಈ ಹಿಂದೆ ಸ್ಪಷ್ಟ ಆದೇಶಗಳನ್ನು ಹೊರಡಿಸಿದ್ದರೂ, ಆ ಆದೇಶವನ್ನು ಉಲ್ಲಂಘಿಸಿ ಆಚರಣೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ವೈರಲ್ ಆಗಿರುವ ಚಿತ್ರಗಳಲ್ಲಿ ಠಾಣೆಯ ಸಿಬ್ಬಂದಿ ಸಮ್ಮುಖದಲ್ಲೇ ಹುಟ್ಟುಹಬ್ಬ ಆಚರಿಸಿರುವುದು ಕಂಡುಬಂದಿದ್ದು, ಇಲಾಖೆಯ ನಿಯಮಗಳನ್ನು ಕಡೆಗಣಿಸಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದರೂ ರಾಜಾರೋಷವಾಗಿ ಆಚರಣೆ ನಡೆಸಿರುವುದು ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಈ ಘಟನೆಗೆ ಸಂಬಂಧಿಸಿದಂತೆ ಶಿಸ್ತು ಉಲ್ಲಂಘಿಸಿರುವ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯಗಳಿಂದ ಆಗ್ರಹ ವ್ಯಕ್ತವಾಗುತ್ತಿದೆ. ವೈರಲ್ ಆದ ಫೋಟೋಗಳ ಬಗ್ಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಕೆಜೆ ಹಳ್ಳಿಯಲ್ಲಿ ಮಾರಕಾಸ್ತ್ರ ಹಿಡಿದು ಪುಂಡಾಟ ಪ್ರಕರಣ – ಮೂವರು ಕಿಡಿಗೇಡಿಗಳ ಬಂಧನ!



















