ಬೆಂಗಳೂರು : ಮಯೂರ ಫೈಟರ್ಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗಾಗಿ ಮಹಿಳೆಯರೇ ಆಯೋಜಿಸುತ್ತಿರುವ ವಿಶೇಷ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಇದಾಗಿದ್ದು, ಹೆಣ್ಣು ಮಕ್ಕಳಿಂದ, ಹೆಣ್ಣು ಮಕ್ಕಳಿಗಾಗಿ ನಡೆಯುತ್ತಿರುವ ವಿಶೇಷ ಕ್ರೀಡಾಕೂಟವಾಗಿ ಗಮನ ಸೆಳೆಯುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜುಗಳು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಿಂದ ಮಹಿಳಾ ಬಾಕ್ಸರ್‌ಗಳು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ 300ಕ್ಕೂ ಹೆಚ್ಚು ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ರಾಜ್ಯದ ವಿವಿಧ ಭಾಗಗಳ ಮಹಿಳಾ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಈ ಚಾಂಪಿಯನ್‌ಶಿಪ್ ಉತ್ತಮ ವೇದಿಕೆಯಾಗಿದೆ.

“ಬಲಿಷ್ಠ ಮಹಿಳೆ – ಬಲಿಷ್ಠ ಸಮಾಜ” ಎಂಬ ಸಂದೇಶದೊಂದಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಕ್ರೀಡಾ ಪ್ರತಿಭೆಯನ್ನು ಬೆಳೆಸುವುದರ ಜೊತೆಗೆ, ಮಹಿಳಾ ಬಾಕ್ಸಿಂಗ್‌ಗೆ ರಾಜ್ಯದಲ್ಲಿ ಮತ್ತಷ್ಟು ಉತ್ತೇಜನ ನೀಡುವುದು ಚಾಂಪಿಯನ್‌ಶಿಪ್‌ನ ಪ್ರಮುಖ ಉದ್ದೇಶವಾಗಿದೆ.
ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಜೇತರಿಗೆ ವಿಶೇಷವಾಗಿ ಮಯೂರ ಕಪ್, ರಾಣಿ ಚೆನ್ನಮ್ಮ ಕಪ್ ಹಾಗೂ ಬೆಳವಾಡಿ ಮಲ್ಲಮ್ಮ ಕಪ್ ನೀಡಲಾಗುತ್ತಿದೆ. ಮಹಿಳಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಶೇಷ ಬಹುಮಾನಗಳು ಹಾಗೂ ಗೌರವಗಳನ್ನು ನೀಡಲಾಗುತ್ತಿದೆ.
ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲೂ ಮುಂಚೂಣಿಗೆ ಬರಬೇಕು, ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಬೇಕು ಎಂಬ ಸಂದೇಶವನ್ನು ಈ ಚಾಂಪಿಯನ್‌ಶಿಪ್ ಸಾರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಮಹಿಳಾ ಬಾಕ್ಸರ್‌ಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿರುವುದು ಮಹಿಳಾ ಬಾಕ್ಸಿಂಗ್‌ಗೆ ದೊರೆಯುತ್ತಿರುವ ಹೊಸ ಉತ್ತೇಜನಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ : ಪುತ್ತೂರಿನಲ್ಲಿ ₹1.05 ಕೋಟಿ ಮೌಲ್ಯದ ಮಾದಕವಸ್ತು ವಶ ; ಓರ್ವ ಆರೋಪಿ ಬಂಧನ



















