ವಿಜಯನಗರ:ಜಿಲ್ಲೆಯ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ಬಳಿ ಈಜಲು ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ಕುರುಗೋಡು ತಾಲೂಕಿನ ಎಚ್. ವೀರಾಪುರ ಗ್ರಾಮದ 16 ವರ್ಷದ ಸತೀಶ್ ಮತ್ತು 12 ವರ್ಷದ ಫಕ್ಕೀರಪ್ಪ ಮೃತ ಬಾಲಕರು.
ಇಬ್ಬರೂ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಬುಕ್ಕಸಾಗರದ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದರು. ಬಳಿಕ ಗ್ರಾಮದ ಬಳಿಯ ಕಾಲುವೆಯಲ್ಲಿ ಈಜಾಡಲು ತೆರಳಿದ್ದರು. ಕಾಲುವೆಗೆ ಇಳಿದಾಗ ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರು ಇಬ್ಬರೂ ಬಾಲಕರ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















