ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಮಾದಕವಸ್ತು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನದಿಂದ ಮಂಗಳೂರಿಗೆ ಕಾರಿನಲ್ಲಿ ಮಾದಕವಸ್ತು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದು, ಬೆಂಗಳೂರು ಕಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಕಾರಿನಲ್ಲಿ ಮಾದಕವಸ್ತು ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ತಪಾಸಣೆ ನಡೆಸಿದಾಗ 538.62 ಗ್ರಾಂ MDMA ಹಾಗೂ 99.12 ಗ್ರಾಂ ಕೊಕೈನ್ ಪತ್ತೆಯಾಗಿದ್ದು, ಪೊಲೀಸರು ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ವಶಪಡಿಸಿಕೊಂಡಿರುವ MDMA ಮತ್ತು ಕೊಕೈನ್ ಸೇರಿದಂತೆ ಮಾದಕವಸ್ತುಗಳ ಒಟ್ಟು ಮೌಲ್ಯ ಸುಮಾರು ₹1.05 ಕೋಟಿ ಎಂದು ಅಂದಾಜಿಸಲಾಗಿದೆ. ಆರೋಪಿಯು ಮಾದಕವಸ್ತುಗಳನ್ನು ಎಲ್ಲಿಗೆ ಸಾಗಿಸುತ್ತಿದ್ದ, ಯಾರಿಗೆ ನೀಡಲು ತೆಗೆದುಕೊಂಡು ಹೋಗುತ್ತಿದ್ದ ಹಾಗೂ ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ NDPS Act 1985ರ ಕಲಂ 8(C), 22(C) ಹಾಗೂ 21(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ ; ರೈಲ್ವೆ ಇಲಾಖೆಯಲ್ಲಿ 3,993 ಎಂಜಿನಿಯರ್‌ಗಳ ನೇಮಕಾತಿಗೆ ಅಧಿಸೂಚನೆ : ಕೂಡಲೇ ಅರ್ಜಿ ಸಲ್ಲಿಸಿ


















