ಬೆಂಗಳೂರು: ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಸುತ್ತಮುತ್ತ ಕಾರ್ಯಕರ್ತೆಯರು ರಾತ್ರಿಯಿಡೀ ಚಳಿಯಲ್ಲೇ ರಸ್ತೆಯ ಮೇಲೆ ಮಲಗಿ ಹೋರಾಟ ಮುಂದುವರಿಸಿದ್ದಾರೆ.
ಮಾಸಿಕ ಗೌರವಧನವನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನಿವೃತ್ತರಾದವರಿಗೆ ಬಾಕಿ ಇರುವ ಇಡಿಗಂಟು ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಆಶಾ ಸುಗಮಕಾರರನ್ನು ಮರು ನೇಮಕ ಮಾಡಿ ಅವರಿಗೆ ಸೂಕ್ತ ವೇತನ ನೀಡಬೇಕು. ಜೊತೆಗೆ ಸುಗಮಕಾರರಿಗೆ ಮತ್ತು ಎನ್ಐಒಎಸ್ ಪೂರ್ಣಗೊಳಿಸಿದ ಕಾರ್ಯಕರ್ತೆಯರಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಬೇಕು. ಕಾಯಿಲೆ ಚಿಕಿತ್ಸಾ ಅವಧಿಯಲ್ಲೂ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಪಾವತಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.


















