ದಕ್ಷಿಣ ಕನ್ನಡ: ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಕಲಬೆರಕೆ ಶಂಕೆ ಹಾಗೂ ತಪ್ಪು ಬ್ರ್ಯಾಂಡಿಂಗ್ ಮತ್ತು ಲೇಬಲ್ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಒಟ್ಟು 1,240 ಕೆಜಿ ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಣ್ಣೆಯಲ್ಲಿ ತಲಾ 10 ಕೆಜಿಯ 11 ಬಾಕ್ಸ್ ಕಡಲೆಕಾಯಿ ಎಣ್ಣೆ, ತಲಾ 35 ಲೀಟರ್ನ 30 ಕ್ಯಾನ್ ಕಡಲೆಕಾಯಿ ಎಣ್ಣೆ ಹಾಗೂ ತಲಾ 20 ಕೆಜಿಯ 4 ಬಾಕ್ಸ್ ತೆಂಗಿನೆಣ್ಣೆ ಸೇರಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು ಖರೀದಿಸಿ ತಂದು, ಅದನ್ನು ಮರುಪ್ಯಾಕಿಂಗ್ ಮಾಡಿ ಕೋಲ್ಡ್ ಪ್ರೆಸ್ಡ್ ಗ್ರೌಂಡ್ನಟ್ ಆಯಿಲ್ ಎಂದು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಉತ್ಪನ್ನದ ನೈಜ ಸ್ವರೂಪಕ್ಕೆ ವಿರುದ್ಧವಾಗಿ ಲೇಬಲ್ ಮಾಡಿರುವುದು ಗ್ರಾಹಕರಿಗೆ ದಾರಿ ತಪ್ಪಿಸುವ ಕ್ರಮವಾಗಿದೆ ಎಂದು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


















