ವಾಷಿಂಗ್ಟನ್ : ಶಾಂತಿ ಒಪ್ಪಂದದ ಮಧ್ಯೆಯೇ ಅಮೆರಿಕ ಸೇನೆಯು ಇರಾನ್ನ ಪ್ರಮುಖ ಆಯಕಟ್ಟಿನ ಪ್ರದೇಶಗಳ ಮೇಲೆ ದಾಳಿ ತೀವ್ರಗೊಳಿಸಿದೆ. ಇದರ ಜೊತೆಗೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಜಾಗತಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖರ್ಗ್ ದ್ವೀಪವನ್ನು ಅಮೆರಿಕ ಸೇನೆ ಧ್ವಂಸಗೊಳಿಸಿದೆ ಎಂದು ಬಿಂಬಿಸುವ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಡಿಯೋಗಳನ್ನು ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕ ಸೇನೆಯು ಇತ್ತೀಚೆಗಷ್ಟೇ ಹೊರ್ಮುಜ್ ಜಲಸಂಧಿಯಲ್ಲಿರುವ ‘ಲಾರ್ಕ್’ ಎಂಬ ಸಣ್ಣ ದ್ವೀಪದಲ್ಲಿದ್ದ ಇರಾನ್ನ ರಾಕೆಟ್ ಲಾಂಚರ್ಗಳ ಮೇಲೆ ಸೀಮಿತ ಹಾಗೂ ನಿಖರ ವೈಮಾನಿಕ ದಾಳಿ ನಡೆಸಿತ್ತು. ಇರಾನ್ ಪಡೆಗಳು ಜಲಸಂಧಿಯಲ್ಲಿ ಸ್ಫೋಟಕಗಳನ್ನು (ಸಮುದ್ರ ಬಾಂಬ್) ಅಳವಡಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿತ್ತು.
ಆದರೆ, ಈ ದಾಳಿಯ ಬೆನ್ನಲ್ಲೇ ಅಧ್ಯಕ್ಷ ಟ್ರಂಪ್ ಹಂಚಿಕೊಂಡ ವಿಡಿಯೋದಲ್ಲಿ ಖರ್ಗ್ ದ್ವೀಪದ ತೈಲ ಸಂಗ್ರಹಣಾ ಟ್ಯಾಂಕರ್ಗಳು ಹಾಗೂ ತೈಲ ಹಡಗುಗಳು ಭೀಕರ ಸ್ಫೋಟಕ್ಕೆ ತುತ್ತಾಗಿ ಧ್ವಂಸಗೊಳ್ಳುತ್ತಿರುವ ದೃಶ್ಯಗಳಿವೆ. “ಖರ್ಗ್ ದ್ವೀಪವನ್ನು ಪುಡಿಪುಡಿ ಮಾಡಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಟ್ರಂಪ್ ಇದನ್ನು ಪೋಸ್ಟ್ ಮಾಡಿದ್ದು, ವಾಸ್ತವದಲ್ಲಿ ಖರ್ಗ್ ದ್ವೀಪದ ಮೇಲೆ ಯಾವುದೇ ದಾಳಿ ನಡೆದ ಬಗ್ಗೆ ವರದಿಯಾಗಿಲ್ಲ. ಇರಾನ್ಗೆ ಮಾನಸಿಕವಾಗಿ ಹೆದರಿಸಲು ಟ್ರಂಪ್ ಈ ರೀತಿ ಎಐ ತಂತ್ರಜ್ಞಾನವನ್ನು ಬಳಸಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇರಾನ್ ಪ್ರತಿದಾಳಿ
ಅಮೆರಿಕದ ದಾಳಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಇರಾನ್ನ ರೆವೊಲ್ಯೂಷನರಿ ಗಾರ್ಡ್ಸ್, ಜೋರ್ಡಾನ್ನಲ್ಲಿರುವ ಅಮೆರಿಕದ ಎರಡು ಮಿಲಿಟರಿ ವಾಯುನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಈ ದಾಳಿಯಿಂದ ಭಾರೀ ಹಾನಿಯಾಗಿದೆ ಎಂದು ಇರಾನ್ ಮಾಧ್ಯಮಗಳು ಪ್ರತಿಪಾದಿಸಿದ್ದರೆ, ಜೋರ್ಡಾನ್ ಸೇನೆಯು ಇರಾನ್ ನಿಂದ ಬಂದ ಎಂಟು ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಇದಲ್ಲದೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿರುವ ಅಲ್ ಮಿನ್ಹಾದ್ ವಾಯುನೆಲೆಯಲ್ಲಿರುವ ಅಮೆರಿಕನ್ ಸಿಬ್ಬಂದಿಯನ್ನು ಸಹ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಟೆಹ್ರಾನ್ ತಿಳಿಸಿದ್ದು, ಈ ಭಾಗದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.
ಖರ್ಗ್ ದ್ವೀಪ ಏಕೆ ಇಷ್ಟೊಂದು ಮಹತ್ವದ್ದು?
ಇರಾನ್ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಖರ್ಗ್ ದ್ವೀಪವು, ಯುದ್ಧ ಆರಂಭವಾಗುವ ಮೊದಲು ಇರಾನ್ನ ಶೇ.90ರಷ್ಟು ತೈಲ ರಫ್ತನ್ನು ನಿರ್ವಹಿಸುತ್ತಿತ್ತು. ಉತ್ತರದ ಗಲ್ಫ್ ಪ್ರದೇಶದಲ್ಲಿ ಇರಾನ್ ಕರಾವಳಿಯಿಂದ 26 ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪವು, ಆಳವಾದ ಸಮುದ್ರ ತೀರವನ್ನು ಹೊಂದಿರುವುದರಿಂದ ಬೃಹತ್ ತೈಲ ಹಡಗುಗಳು (ಟ್ಯಾಂಕರ್) ಸುಲಭವಾಗಿ ಬಂದು ತಲುಪಲು ಸೂಕ್ತವಾಗಿದೆ. ಒಪೆಕ್ (OPEC) ಒಕ್ಕೂಟದಲ್ಲಿ ಮೂರನೇ ಅತಿದೊಡ್ಡ ತೈಲ ಉತ್ಪಾದಕ ದೇಶವಾಗಿರುವ ಇರಾನ್ಗೆ ಖರ್ಗ್ ದ್ವೀಪವೇ ಜೀವಾಳ. ಪ್ರಸ್ತುತ ಅಮೆರಿಕದ ನೌಕಾಪಡೆಯು ಈ ಮಾರ್ಗದಲ್ಲಿ ದಿಗ್ಬಂಧನ ಹೇರಿರುವುದರಿಂದ ಇರಾನ್ನ ತೈಲ ರಫ್ತು ಕುಸಿದಿದೆ. ಒಂದು ವೇಳೆ ಖರ್ಗ್ ದ್ವೀಪದ ಮೇಲೆ ನಿಜವಾಗಿಯೂ ದಾಳಿ ನಡೆದರೆ, ಅದು ಇರಾನ್ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶ ಮಾಡಲಿದೆ.
ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ 27.7 ಕೆಜಿ ತೂಕದ ದೈತ್ಯ ಹೆಬ್ಬಾವು ಪ್ರತ್ಯಕ್ಷ!



















