ಲಂಡನ್: ಬ್ರಿಟನ್‌ನ ಡೊನ್‌ಕಾಸ್ಟರ್ ಸಮೀಪವಿರುವ ‘ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್’ನಲ್ಲಿ ವ್ಯಕ್ತಿಯೊಬ್ಬರು ಹುಲಿಯ ಆವರಣದೊಳಗೆ ಜಿಗಿದು ಹುಲಿಯ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ 1.35ರ ಸುಮಾರಿಗೆ ಈ ಘಟನೆ ನಡೆದಿದ್ದು, ವ್ಯಕ್ತಿ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಹುಲಿ ಆತನ ಮೇಲೆ ದಾಳಿ ನಡೆಸಿದೆ. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರಾದರೂ, ಗಾಯಾಳು ಗಂಭೀರ ಸ್ವರೂಪದ ಗಾಯಗಳಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಯಾರ್ಕ್‌ಷೈರ್ ಪೊಲೀಸರು ತಿಳಿಸಿದ್ದಾರೆ.
ಮೃತರ ವಿವರಗಳನ್ನು ಪೊಲೀಸರು ತಕ್ಷಣಕ್ಕೆ ಬಹಿರಂಗಪಡಿಸಿಲ್ಲವಾದರೂ, ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ವಿಶೇಷ ಅಧಿಕಾರಿಗಳ ಮೂಲಕ ಸಾಂತ್ವನ ಹಾಗೂ ಬೆಂಬಲ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಈ ಅನಿರೀಕ್ಷಿತ ಘಟನೆಯು ಉದ್ಯಾನದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಘಟನೆಗೆ ನಿಖರವಾದ ಕಾರಣವೇನು ಎಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ. ಪೊಲೀಸರು ಮತ್ತು ವನ್ಯಜೀವಿ ಉದ್ಯಾನದ ಆಡಳಿತ ಮಂಡಳಿಯು ಜಂಟಿಯಾಗಿ ಸಂಪೂರ್ಣ ತನಿಖೆ ಆರಂಭಿಸಿದೆ.
ಹುಲಿಗೆ ಯಾವುದೇ ಗಾಯವಿಲ್ಲ: ಪೊಲೀಸರ ಸ್ಪಷ್ಟನೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿರುವ ಪೊಲೀಸರು, ಹುಲಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಮತ್ತು ಅದು ಸುರಕ್ಷಿತವಾಗಿ ತನ್ನ ಆವರಣದಲ್ಲೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ಭರವಸೆ ನೀಡಿರುವ ಅಧಿಕಾರಿಗಳು, ಘಟನೆಗೆ ಸಂಬಂಧಿಸಿದ ಯಾವುದೇ ವಿಡಿಯೋಗಳು ಅಥವಾ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಉದ್ಯಾನ ತಾತ್ಕಾಲಿಕ ಬಂದ್
ಅಪಘಾತ ಸಂಭವಿಸಿದ ಕೂಡಲೇ ತುರ್ತು ಸುರಕ್ಷತಾ ಕ್ರಮಗಳನ್ನು ಜಾರಿ ಮಾಡಿರುವ ಉದ್ಯಾನದ ಸಿಬ್ಬಂದಿ, ಅಲ್ಲಿಂದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಹೊರನಡೆಸಿ ಉದ್ಯಾನವನ್ನು ಸಂಪೂರ್ಣವಾಗಿ ಖಾಲಿ ಮಾಡಿಸಿದರು. ಭದ್ರತೆ ಮತ್ತು ಪರಿಶೀಲನಾ ಕಾರ್ಯಗಳ ಹಿನ್ನೆಲೆಯಲ್ಲಿ ಈ ವನ್ಯಜೀವಿ ಉದ್ಯಾನವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರದವರೆಗೆ ಮುಚ್ಚಲಾಗುವುದು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಸಂದರ್ಶಕರು, ಸಿಬ್ಬಂದಿ ಹಾಗೂ ಪ್ರಾಣಿಗಳ ಸುರಕ್ಷತೆಗೆ ತಮ್ಮದು ಯಾವಾಗಲೂ ಮೊದಲ ಆದ್ಯತೆ ಎಂದು ಉದ್ಯಾನದ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ:ರಿಯಾದ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ : 20 ಸಾವು, ಭಾರತದಿಂದ ತೀವ್ರ ಖಂಡನೆ



















