ನವದೆಹಲಿ : ದೆಹಲಿಯಲ್ಲಿ ಸುರಿದ ಭಾರೀ ಮಳೆಗೆ ಸಂಸತ್ ಭವನದ ಆವರಣ ಜಲಾವೃತಗೊಂಡಿದ್ದು, ಇದನ್ನು ಇಟ್ಟುಕೊಂಡು ವಿಪಕ್ಷ ಕಾಂಗ್ರೆಸ್ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಕಾಲೆಳೆದಿದೆ. ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ನದಿಯಲ್ಲಿ ಈಜುವ ವಿಡಿಯೋ ಹಂಚಿಕೊಂಡು ತಮ್ಮನ್ನು ತಾವು “ಈಜುಗಾರ/ಖಿಲಾಡಿ” ಎಂದು ಕರೆದುಕೊಂಡಿದ್ದ ಸಂಸದೀಯ ವ್ಯವಹಾರಗಳ ಸಚಿವರಿಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ತಿರುಗೇಟು ನೀಡಿದೆ.
ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ನೂತನ ಸಂಸತ್ ಭವನದ ಆವರಣದಲ್ಲಿ ನೀರು ತುಂಬಿಕೊಂಡಿರುವ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಹಂಚಿಕೊಂಡ ಕೆಪಿಸಿಸಿ/ಕಾಂಗ್ರೆಸ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆ, “ಇಲ್ಲಿನ ಖಿಲಾಡಿ ಕಿರಣ್ ರಿಜಿಜು ಅವರೇ, ದಯವಿಟ್ಟು ಇನ್ನೊಂದು ರೀಲ್ ಮಾಡಿ ತೋರಿಸಿ” ಎಂದು ಪೋಸ್ಟ್ ಮಾಡಿದೆ. ಅಷ್ಟೇ ಅಲ್ಲದೆ, “ಪ್ರಧಾನಿ ಮೋದಿ ಅವರು ವೆಚ್ಚ ಕಡಿತದ ಭಾಗವಾಗಿ ನೂತನ ಸಂಸತ್ತನ್ನು ಒಳಾಂಗಣ ವಾಟರ್ ಪಾರ್ಕ್ ಆಗಿ ಪರಿವರ್ತಿಸಿದ್ದಾರೆ. ಇದರಿಂದ ಸಚಿವರು ಅರುಣಾಚಲ ಪ್ರದೇಶಕ್ಕೆ ತೆರಳಿ ಸಾರ್ವಜನಿಕರ ಹಣ ವ್ಯರ್ಥ ಮಾಡದೆ ಇಲ್ಲೇ ಈಜುವ ಮತ್ತು ಧುಮುಕುವ ರೀಲ್ಸ್ ಮಾಡಬಹುದು” ಎಂದು ಪ್ರಧಾನಿ ಮೋದಿಯವರ ವಿರುದ್ಧವೂ ವ್ಯಂಗ್ಯವಾಡಿದೆ.
ಆಗಸ್ಟ್ 23ರಂದು ರಿಜಿಜು ಹಂಚಿಕೊಂಡ ವಿಡಿಯೋವೇ ಈ ವಿವಾದದ ಮೂಲ. ಅರುಣಾಚಲ ಪ್ರದೇಶದ ರಭಸವಾಗಿ ಹರಿಯುವ ನದಿಯಲ್ಲಿ ಈಜುತ್ತಾ, ತಾವು ಸಹಜವಾಗಿಯೇ ನದಿಗಳಲ್ಲಿ ಈಜುವ ‘ಖಿಲಾಡಿ’ ಎಂದು ಅದರಲ್ಲಿ ಅವರು ಬರೆದುಕೊಂಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಈಜುವ ವಿಡಿಯೋಗಳಿಗೆ ಹೋಲಿಕೆ ಬಂದಾಗ, “ನಾನು ತರಬೇತಿ ಪಡೆದು ಈಜುವುದಿಲ್ಲ, ಹುಟ್ಟಿನಿಂದಲೇ ನದಿಯಲ್ಲಿ ಈಜುವುದು ನನ್ನ ಅಭ್ಯಾಸ” ಎಂದು ಉತ್ತರಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಪವನ್ ಖೇರಾ ಸೇರಿದಂತೆ ಹಲವರು ಸಚಿವರ ವಿರುದ್ಧ ಟೀಕೆ ಮಾಡಿದ್ದರು.
ಬಿಜೆಪಿ- ಕಾಂಗ್ರೆಸ್ ಆರೋಪ-ಪ್ರತ್ಯಾರೋಪ
ಸಂಸತ್ ಭವನದ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಕೆಳಗೆ ಬಕೆಟ್ ಇಟ್ಟಿರುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ, “ನವ ಭಾರತದ ಹೊಸ ಸಂಸತ್ತಿಗೆ ಮತಗಳಲ್ಲ, ದೋಣಿಗಳು ಬೇಕಾಗಿವೆ” ಎಂದು ಕಿಡಿಕಾರಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, “ಕಾಂಗ್ರೆಸ್ ಹಂಚಿಕೊಳ್ಳುತ್ತಿರುವುದು ಹುಸಿ ಸುದ್ದಿ (ಫೇಕ್ ನ್ಯೂಸ್). ಈ ವಿಡಿಯೋ ಸಂಸತ್ತಿನದ್ದಲ್ಲ, ಕಾಂಗ್ರೆಸ್ ಒಂದು ಫೇಕ್ ನ್ಯೂಸ್ ಫ್ಯಾಕ್ಟರಿ” ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಅವಧಿಗೂ ಮುನ್ನ ನಿವೃತ್ತರಾದರೆ PF ಖಾತೆ ನಿಷ್ಕ್ರಿಯ ಆಗೋದು ಯಾವಾಗ? ಇಲ್ಲಿದೆ ಮಾಹಿತಿ



















