ಬೆಂಗಳೂರು : ಸಾಲ ಪಡೆಯುವುದು ಈಗ ತುಂಬ ಸುಲಭವಾಗಿದೆ. ಮೊದಲಿನಂತೆ ಬ್ಯಾಂಕ್‌ಗಳಿಗೆ ಅಲೆದಾಡಬೇಕಿಲ್ಲ, ಅರ್ಜಿ ಸಲ್ಲಿಸಿ ಕಾಯಬೇಕಿಲ್ಲ. ಸಾಲ ನೀಡುವ ಆ್ಯಪ್‌ಗಳು ಕ್ಷಣಾರ್ಧದಲ್ಲೇ ಜನರಿಗೆ ಆನ್‌ಲೈನ್ ಮೂಲಕ ಸಾಲ ನೀಡುತ್ತಿವೆ. ಆದರೆ, ಹೀಗೆ ಆ್ಯಪ್‌ಗಳನ್ನು ನಂಬಿ ಸಾಲ ಪಡೆಯುವವರಿಗೆ ಈಗ ದೊಡ್ಡ ಎಚ್ಚರಿಕೆ ಸಿಕ್ಕಿದೆ. ಹೌದು, ಸಾಲ ನೀಡುವ ಸೋಗಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ 3 ಆ್ಯಪ್‌ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದೆ.
ಆನ್‌ಲೈನ್ ಮೂಲಕ ಸುಲಭವಾಗಿ ಸಾಲ ನೀಡುವ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಕಲಿ ಮತ್ತು ಅಸುರಕ್ಷಿತ ಲೋನ್ ಆ್ಯಪ್ ಗಳ ವಿರುದ್ಧ ಗೂಗಲ್ ಮತ್ತು ಸರ್ಕಾರ ಕಠಿಣ ಕ್ರಮ ಕೈಗೊಂಡಿವೆ. ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದ್ದು, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸಾವಿರಾರು ಆ್ಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಹಾರಿಜಾನ್ ಕ್ಯಾಶ್ ಸರ್ವಿಸ್, ಮನಿ ಸ್ಕೋರ್ ಮಾನಿಟರ್ ಹಾಗೂ ಜೆಲ್ಲಿ ಕ್ರೆಡಿಟ್ ಎಂಬ ಆ್ಯಪ್‌ಗಳನ್ನು ತೆಗೆದುಹಾಕಲಾಗಿದೆ.
ನಕಲಿ ಲೋನ್ ಆ್ಯಪ್‌ಗಳ ಹಾವಳಿ ಹೇಗಿರುತ್ತದೆ?
ಸುಲಭ ಸಾಲದ ಆಮಿಷ: ಯಾವುದೇ ದಾಖಲೆಗಳಿಲ್ಲದೆ ಅಥವಾ ಕಡಿಮೆ ಸಿಬಿಲ್ ಸ್ಕೋರ್ ನೊಂದಿಗೆ ಕೆಲವೇ ನಿಮಿಷಗಳಲ್ಲಿ ಸಾಲ ನೀಡುವುದಾಗಿ ಸಾಮಾಜಿಕ ಜಾಲತಾಣಗಳು ಮತ್ತು ಆ್ಯಪ್ ಗಳ ಮೂಲಕ ಜಾಹೀರಾತು ನೀಡುತ್ತಾರೆ.ವೈಯಕ್ತಿಕ ಡೇಟಾ ಕಳವು: ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿದ ತಕ್ಷಣ, ಮೊಬೈಲ್ ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್ (ಸಂಬಂಧಿಕರು ಮತ್ತು ಸ್ನೇಹಿತರ ನಂಬರ್ ಗಳು), ಫೋಟೋ ಗ್ಯಾಲರಿ ಹಾಗೂ ಕ್ಯಾಮೆರಾದ ಸಂಪೂರ್ಣ ನಿಯಂತ್ರಣವನ್ನು ಇವು ವಶಕ್ಕೆ ಪಡೆದುಕೊಳ್ಳುತ್ತವೆ. ವೇತನ ಮತ್ತು ಬೆದರಿಕೆ: ಸಾಲದ ಮೊತ್ತಕ್ಕಿಂತ ಹೆಚ್ಚಿನ ಬಡ್ಡಿ ಮತ್ತು ದಂಡವನ್ನು ವಸೂಲಿ ಮಾಡಿ, ಬಳಕೆದಾರರ ಮೊಬೈಲ್ ನಲ್ಲಿರುವ ಸಂಪರ್ಕಗಳಿಗೆ ಫೋಟೋಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ.
ಸುರಕ್ಷಿತವಾಗಿರುವುದು ಹೇಗೆ?
ಅಧಿಕೃತ ಪ್ಲೇ ಸ್ಟೋರ್ ಬಳಸಿ: ಯಾವುದೇ ಅಜ್ಞಾತ ಲಿಂಕ್ ಗಳು, ಮೂರನೇ ವ್ಯಕ್ತಿಯ ವೆಬ್ ಸೈಟ್ ಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಪಿಕೆ ಫೈಲ್ ಗಳ ಮೂಲಕ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಬೇಡಿ. ಆ್ಯಪ್ ಗಳ ಅನುಮತಿಗಳನ್ನು ಪರಿಶೀಲಿಸಿ: ಸಾಲ ನೀಡುವ ಯಾವುದೇ ಆ್ಯಪ್‌ಗೆ ನಿಮ್ಮ ಮೊಬೈಲ್ ನ ಸಂಪರ್ಕ ಪಟ್ಟಿ ಅಥವಾ ಫೋಟೋ ಗ್ಯಾಲರಿಯ ಪ್ರವೇಶದ ಅಗತ್ಯವಿರುವುದಿಲ್ಲ. ಅಂತಹ ಅನುಮತಿಗಳನ್ನು ಕೋರುವ ಆ್ಯಪ್‌ಗಳಿಂದ ದೂರವಿರಿ. ಆರ್‌ಬಿಐ ಅನುಮೋದನೆ ಪರಿಶೀಲಿಸಿ: ಆ್ಯಪ್ ಅಥವಾ ಸಾಲ ನೀಡುವ ಸಂಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ನೋಂದಾಯಿಸಲ್ಪಟ್ಟಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ : “ಸ್ವಲ್ಪ ತಡಿ ಬ್ರೋ” : ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಸಂಸದೆ ಕಂಗನಾ ರಣಾವತ್


















