ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಖಾಸಗಿ ಉದ್ಯೋಗಿಗಳ ಪಿಎಫ್ ಖಾತೆಯ ನಿಷ್ಕ್ರಿಯತೆ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಎಕ್ಸ್ ಜಾಲತಾಣದಲ್ಲಿ ಕೆಲ ದಿನಗಳ ಹಿಂದಷ್ಟೇ ಇಪಿಎಫ್ಒ ಅಪ್ಡೇಟ್ ನೀಡಿದೆ. ಉದ್ಯೋಗಿಯು ಅವಧಿಗೂ ಮುನ್ನ ನಿವೃತ್ತರಾದರೆ 58 ವರ್ಷಗಳವರೆಗೆ, 58 ವರ್ಷಗಳ ನಂತರ ನಿವೃತ್ತರಾದರೆ 3 ವರ್ಷಗಳವರೆಗೆ ಮಾತ್ರ ಖಾತೆ ಸಕ್ರಿಯವಾಗಿರಲಿದೆ ಎಂದು ತಿಳಿಸಿದೆ.
55 ವರ್ಷ ಅಥವಾ ನಂತರ ನಿವೃತ್ತಿಯಾದರೆ: ಯಾವುದೇ ನೌಕರರು 55 ವರ್ಷ ಅಥವಾ ಆ ನಂತರ ನಿವೃತ್ತಿ ಹೊಂದಿದರೆ, ನಿವೃತ್ತಿಯಾದ 3 ವರ್ಷಗಳ (36 ತಿಂಗಳು) ಬಳಿಕ ಅವರ ಇಪಿಎಫ್ ಖಾತೆಯು ನಿಷ್ಕ್ರಿಯ ಖಾತೆಯಾಗಿ ಬದಲಾಗುತ್ತದೆ. ಆಗ ಪಿಎಫ್ ಖಾತೆಗೆ ಯಾವುದೇ ಬಡ್ಡಿ ಜಮೆ ಆಗುವುದಿಲ್ಲ.
ಬಡ್ಡಿ ಜಮೆ ಆಗಲ್ಲ: ಒಮ್ಮೆ ಖಾತೆಯು ನಿಷ್ಕ್ರಿಯಗೊಂಡ ಬಳಿಕ, ಆ ಖಾತೆಗೆ ಯಾವುದೇ ಹೊಸ ಬಡ್ಡಿಯನ್ನು ಜಮಾ ಮಾಡಲಾಗುವುದಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿ 58 ನೇ ವಯಸ್ಸಿನಲ್ಲಿ ನಿವೃತ್ತರಾದರೆ, ಅವರಿಗೆ ಮುಂದಿನ 3 ವರ್ಷಗಳವರೆಗೆ ಅಂದರೆ 61 ನೇ ವಯಸ್ಸಿನವರೆಗೆ ಮಾತ್ರ ಬಡ್ತಿ ಸಿಗುತ್ತದೆ.
55 ವರ್ಷಕ್ಕಿಂತ ಮುಂಚೆ ನಿವೃತ್ತಿ ಹೊಂದಿದರೆ: ನೌಕರರು 55 ವರ್ಷಕ್ಕಿಂತ ಮುಂಚಿತವಾಗಿ (ಉದಾಹರಣೆಗೆ ಸ್ವಯಂ ನಿವೃತ್ತಿ-VRS ಪಡೆದರೆ) ನಿವೃತ್ತರಾದರೆ, ಅವರಿಗೆ ನೇರವಾಗಿ 3 ವರ್ಷದ ನಿಯಮ ಅನ್ವಯಿಸುವುದಿಲ್ಲ. ಬದಲಿಗೆ ಅವರಿಗೆ 58 ವರ್ಷ ತುಂಬುವವರೆಗೆ ಇಪಿಎಫ್ ಖಾತೆಯಲ್ಲಿ ಬಡ್ತಿ ಮುಂದುವರಿಯುತ್ತದೆ.
ಹಣ ಕಳೆದುಹೋಗುವುದಿಲ್ಲ: ಖಾತೆಯು ‘ನಿಷ್ಕ್ರಿಯ’ಗೊಂಡ ತಕ್ಷಣ ನಿಮ್ಮ ಹಣ ಕಳೆದುಹೋಗುತ್ತದೆ ಎಂದಲ್ಲ. ನೀವು ಸರಿಯಾದ ಕ್ಲೈಮ್ ಮಾಡುವ ಮೂಲಕ ಹಣವನ್ನು ಹಿಂಪಡೆಯಬಹುದು. ಖಾತೆ ನಿಷ್ಕ್ರಿಯವಾಗುವುದು ಎಂದರೆ, ನಿಮ್ಮ ಖಾತೆಯನ್ನು ಬ್ಲಾಕ್ ಮಾಡುವುದಲ್ಲ. ಬದಲಾಗಿ, ಬಡ್ಡಿ ಜಮೆ ಆಗುವುದಿಲ್ಲ ಅಷ್ಟೇ.
ಇದನ್ನೂ ಓದಿ : ಎಲೈಟ್ ಮಹಿಳಾ ಕ್ರಿಕೆಟ್‌ಗೆ ಅನಯಾ ಬಾಂಗರ್ ಎಂಟ್ರಿ : ಬಿಗ್ ಬ್ಯಾಶ್ ಲೀಗ್ ಆಡುವ ಅದೃಷ್ಟ!



















