ಕೀವ್ : ಉಕ್ರೇನ್-ರಷ್ಯಾ ಸಂಘರ್ಷವು ಮತ್ತಷ್ಟು ಭೀಕರ ರೂಪ ಪಡೆದುಕೊಂಡಿದ್ದು, ಎರಡೂ ದೇಶಗಳು ಪರಸ್ಪರ ತೀವ್ರ ದಾಳಿಗಳನ್ನು ಆರಂಭಿಸಿವೆ. ಉಕ್ರೇನ್ ಭಾನುವಾರ ನಡೆಸಿದ ಬೃಹತ್ ಡ್ರೋನ್ ದಾಳಿಗೆ ಪ್ರತಿಯಾಗಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ, ಭಾರತೀಯ ಮೂಲದ ಕೋಟ್ಯಧಿಪತಿ ಲಕ್ಷ್ಮಿ ಮಿತ್ತಲ್ ಒಡೆತನದ ಅರ್ಸಿಲರ್ ಮಿತ್ತಲ್ ಉಕ್ಕು ಕಾರ್ಖಾನೆಯು ಹಾನಿಗೊಳಗಾಗಿದೆ. ಉಕ್ರೇನ್‌ನ ಕ್ರಿವೈ ರಿಹ್ ನಗರದಲ್ಲಿರುವ ಈ ಪ್ರಮುಖ ಕೈಗಾರಿಕಾ ಸಂಕೀರ್ಣದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದು, 14 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಉಕ್ರೇನ್‌ನಿಂದ ರಷ್ಯಾ ಮೇಲೆ ಬೃಹತ್ ಡ್ರೋನ್ ದಾಳಿ
ಇದಕ್ಕೂ ಮುನ್ನ ಉಕ್ರೇನ್, ರಷ್ಯಾದ ವಿವಿಧ ನಗರಗಳನ್ನು ಗುರಿಯಾಗಿಸಿಕೊಂಡು ನೂರಾರು ಡ್ರೋನ್‌ಗಳ ಮೂಲಕ ಬೃಹತ್ ದಾಳಿ ನಡೆಸಿತ್ತು. ರಷ್ಯಾದ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ರಾತ್ರೋರಾತ್ರಿ ಆಗಮಿಸಿದ ಸುಮಾರು 822 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಮೊಸೊಕೌ ಸೇರಿದಂತೆ ಪ್ರಮುಖ ಪ್ರಾಂತ್ಯಗಳ ಮೇಲೆ ದಾಳಿ ನಡೆದಿದ್ದು, ಕನಿಷ್ಠ ಆರು ರಷ್ಯನ್ನರು ಮೃತಪಟ್ಟಿದ್ದಾರೆ. ರಷ್ಯಾದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ಮಾರಾಟ ಸಂಸ್ಥೆಯಾದ ವೈಲ್ಡ್‌ಬೆರೀಸ್‌ನ ಉಗ್ರಾಣಕ್ಕೂ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಯುದ್ಧ ಪ್ರಾರಂಭವಾದ ನಂತರ ರಷ್ಯಾ ಕಂಡ ಅತ್ಯಂತ ದೊಡ್ಡ ವೈಮಾನಿಕ ದಾಳಿಗಳಲ್ಲಿ ಇದು ಒಂದಾಗಿದೆ ಎಂದು ಸ್ಥಳೀಯ ಆಡಳಿತ ಬಣ್ಣಿಸಿದೆ.
ಪ್ರತೀಕಾರವಾಗಿ ಕ್ಷಿಪಣಿ ಮಳೆಗರೆದ ರಷ್ಯಾ
ಉಕ್ರೇನ್‌ನ ದಾಳಿಗೆ ಉಗ್ರ ಪ್ರತ್ಯುತ್ತರ ನೀಡಿದ ರಷ್ಯಾ, ಉಕ್ರೇನ್‌ನ ಕೀವ್, ಝಪೊರಿಝಿಯಾ ಹಾಗೂ ಕ್ರಿವೈ ರಿಹ್ ನಗರಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆ. ಅರ್ಸಿಲರ್ ಮಿತ್ತಲ್ ಕಾರ್ಖಾನೆಯ ಬ್ಲಾಸ್ಟ್ ಫರ್ನೇಸ್ ಹಾಗೂ ವಿದ್ಯುತ್ ಉತ್ಪಾದನಾ ವಿಭಾಗಗಳು ದಾಳಿಗೆ ಒಳಗಾಗಿದ್ದು, ಉಕ್ಕು ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ರಷ್ಯಾ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿ ಮಿತ್ರ ರಾಷ್ಟ್ರಗಳಿಂದ ಹೆಚ್ಚಿನ ವೈಮಾನಿಕ ರಕ್ಷಣಾ ವ್ಯವಸ್ಥೆಗೆ ಮನವಿ ಮಾಡಿದ್ದಾರೆ.
ಯುರೋಪ್ ಗಡಿಗೂ ಹಬ್ಬಿದ ಯುದ್ಧದ ಕಾವು
ಈ ಸಂಘರ್ಷದ ಬಿಸಿ ಈಗ ನೆರೆಹೊರೆಯ ಯುರೋಪಿಯನ್ ಹಾಗೂ ನ್ಯಾಟೋ (NATO) ಸದಸ್ಯ ರಾಷ್ಟ್ರಗಳಿಗೂ ತಟ್ಟಲಾರಂಭಿಸಿದೆ. ಉಕ್ರೇನ್ ಗಡಿಗೆ ಸಮೀಪವಿರುವ ರೊಮೇನಿಯಾ ದೇಶದ ವಾಯುಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಡ್ರೋನ್ ಒಂದನ್ನು ಸ್ಪ್ಯಾನಿಷ್ ಎಫ್-18 (F-18) ಯುದ್ಧ ವಿಮಾನವು ಹೊಡೆದುರುಳಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಈ ಸುದೀರ್ಘ ಸಮರವು ಗಡಿ ದಾಟಿ ಇತರ ಯುರೋಪಿಯನ್ ದೇಶಗಳ ಭದ್ರತೆಗೂ ಬೆದರಿಕೆಯೊಡ್ಡುವ ಸುಳಿವನ್ನು ನೀಡಿದೆ.
ಇದನ್ನೂ ಓದಿ : GBA ಎಚ್ಚರಿಕೆ ಬೆನ್ನಲ್ಲೇ ನಿವೇಶನ ಕ್ಲೀನ್ ಮಾಡಿಸಲು ಮುಗಿಬಿದ್ದ ಜನ.. ಜೆಸಿಬಿ ಬಾಡಿಗೆ ದಿಢೀರ್ ಏರಿಕೆ!



















