ಬೆಂಗಳೂರು, ಆ.17 : ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೀಡಿರುವ ಗಡುವು ಸಮೀಪಿಸುತ್ತಿದ್ದಂತೆ ನಗರದಲ್ಲಿ ಜೆಸಿಬಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಜನರು ತಮ್ಮ ನಿವೇಶನಗಳನ್ನು ತರಾತುರಿಯಲ್ಲಿ ಸ್ವಚ್ಛಗೊಳಿಸಲು ಮುಂದಾಗಿದ್ದು, ಇದರ ಬೆನ್ನಲ್ಲೇ ಜೆಸಿಬಿ ಬಾಡಿಗೆಯೂ ಏರಿಕೆಯಾಗಿದೆ.
ಜಿಬಿಎ ವ್ಯಾಪ್ತಿಯ ಪಂಚ ಪಾಲಿಕೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ, ಗಿಡ-ಗಂಟಿ ಬೆಳೆದಿದ್ದರೆ ಆಯಾ ನಿವೇಶನ ಮಾಲೀಕರೇ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಪಾಲಿಕೆ ವತಿಯಿಂದ ಸ್ವಚ್ಛಗೊಳಿಸಿ, ಅದರ ವೆಚ್ಚವನ್ನು ದಂಡದ ರೂಪದಲ್ಲಿ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಆಗಸ್ಟ್ 22 ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ನಿವೇಶನ ಮಾಲೀಕರು ಜೆಸಿಬಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಜೆಸಿಬಿ ಮಾಲೀಕರು ಬಾಡಿಗೆ ದರವನ್ನು ಮನಸೋ ಇಚ್ಛೆ ಹೆಚ್ಚಿಸಿರುವ ಆರೋಪ ಕೇಳಿಬಂದಿದೆ.
ಈ ಹಿಂದೆ ಗಂಟೆಗೆ ಸುಮಾರು 1,000 ಬಾಡಿಗೆಗೆ ಲಭ್ಯವಾಗುತ್ತಿದ್ದ ಜೆಸಿಬಿಗಳಿಗೆ ಇದೀಗ ನಿವೇಶನದ ಗಾತ್ರ ಹಾಗೂ ಕೆಲಸದ ಪ್ರಮಾಣ ಆಧರಿಸಿ 8 ಸಾವಿರದಿಂದ 10 ಸಾವಿರದವರೆಗೆ ಬೇಡಿಕೆ ಇಡಲಾಗುತ್ತಿದೆ ಎನ್ನಲಾಗಿದೆ. ಸಣ್ಣ ನಿವೇಶನಗಳ ಸ್ವಚ್ಛತೆಗೆ ಸುಮಾರು 8 ಸಾವಿರ ಹಾಗೂ ದೊಡ್ಡ ನಿವೇಶನಗಳಿಗೆ 9 ಸಾವಿರದಿಂದ 10 ಸಾವಿರದವರೆಗೆ ಬಾಡಿಗೆ ಪಡೆಯಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶೇಷವಾಗಿ ಬಿಡಿಎ ವತಿಯಿಂದ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸುತ್ತಮುತ್ತ ಸಾವಿರಾರು ನಿವೇಶನಗಳು ಖಾಲಿ ಇರುವುದರಿಂದ ಇಲ್ಲಿ ಜೆಸಿಬಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಗಡುವಿನೊಳಗೆ ನಿವೇಶನ ಸ್ವಚ್ಛಗೊಳಿಸಿಕೊಳ್ಳಬೇಕೆಂಬ ಆತುರದಲ್ಲಿ ಮಾಲೀಕರು ಹೆಚ್ಚಿನ ಬಾಡಿಗೆಯನ್ನೂ ನೀಡಿ ಜೆಸಿಬಿಗಳನ್ನು ಕರೆಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜಿಬಿಎಯ ಸ್ವಚ್ಛತಾ ಸೂಚನೆಯಿಂದ ಖಾಲಿ ನಿವೇಶನಗಳ ಮಾಲೀಕರಿಗೆ ಒತ್ತಡ ಹೆಚ್ಚಾಗಿದ್ದರೆ, ಮತ್ತೊಂದೆಡೆ ಜೆಸಿಬಿ ಮಾಲೀಕರಿಗೆ ಬೇಡಿಕೆ ಹೆಚ್ಚಾಗಿ ಬಾಡಿಗೆಯೂ ಗಗನಕ್ಕೇರಿದೆ.
ಇದನ್ನೂ ಓದಿ : ಶ್ರೀಲಂಕಾ ವಿರುದ್ಧ 167 ರನ್‌ಗಳ ಭರ್ಜರಿ ಬೇಟೆ : ಪಡಿಕ್ಕಲ್ ಯಶಸ್ಸಿನ ಹಿಂದಿನ ಗುಟ್ಟು ಬಿಚ್ಚಿಟ್ಟ ಕೋಚ್


















