ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ರಚಿಸಲಾಗಿರುವ ಐದು ನಗರ ಪಾಲಿಕೆಗಳ ಬಗ್ಗೆ ಕಾಂಗ್ರೆಸ್‌ನೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಮತದಾರರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನಗರಪಾಲಿಕೆಗಳ ಪುನರ್‌ವಿಂಗಡಣೆ ಮಾಡಿ, ಐದು ನಗರ ಪಾಲಿಕೆಗಳ ಬದಲು ಎರಡು ನಗರಪಾಲಿಕೆಗಳನ್ನು ಮಾತ್ರ ಸಾಕು ಎಂದು ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ, ಪ್ರಸ್ತುತ ನಗರದಲ್ಲಿ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದ್ದು, ಅದರ ಬಳಿಕ ಮತದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಸುಮಾರು 1.3 ಕೋಟಿ ಮತದಾರರಿದ್ದು, ಪರಿಷ್ಕರಣೆ ಪೂರ್ಣಗೊಂಡ ಬಳಿಕ ಅದು ಸುಮಾರು 70 ಲಕ್ಷಕ್ಕೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ 70 ಲಕ್ಷ ಮತದಾರರಿಗೆ ಐದು ನಗರಪಾಲಿಕೆಗಳ ಅಗತ್ಯವಿಲ್ಲ. ಕೆಲವು ನಗರಪಾಲಿಕೆಗಳಲ್ಲಿ ಕೇವಲ 10 ರಿಂದ 12 ಲಕ್ಷ ಮತದಾರರು ಮಾತ್ರ ಉಳಿಯಲಿದ್ದು, ಅಂತಹ ಪರಿಸ್ಥಿತಿಯಲ್ಲಿ ಎರಡು ನಗರಪಾಲಿಕೆಗಳೇ ಸಾಕು ಎಂದು ಶಾಸಕರು ತಿಳಿಸಿದ್ದಾರೆ.
ಐದು ನಗರಪಾಲಿಕೆಗಳ ರಚನೆಯ ನಂತರ ಕೆಲವು ಪಾಲಿಕೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಗತ್ಯ ಸಿಬ್ಬಂದಿಯ ಕೊರತೆಯಿಂದ ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ.
ನಗರಪಾಲಿಕೆಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸಿದರೆ ಆಡಳಿತಾತ್ಮಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಆದ್ದರಿಂದ ಮತದಾರರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನಗರಪಾಲಿಕೆಗಳ ಪುನರ್‌ವಿಂಗಡಣೆ ಮಾಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಗೆ ಮನವಿ ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ಈ ಪತ್ರವು ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ನಗರಪಾಲಿಕೆಗಳ ವ್ಯವಸ್ಥೆ ಕುರಿತು ಆಡಳಿತ ಹಾಗೂ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಪಂಚ ಪಾಲಿಕೆಗಳ ಖಾತೆಗೆ ಮತ್ತೊಂದು ಜವಾಬ್ದಾರಿ!



















