ನವದೆಹಲಿ: ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಹಾಗೂ ಕೇಂದ್ರ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ತಮ್ಮ ವಿರುದ್ಧ ಅಶ್ಲೀಲ ಶಬ್ದಗಳನ್ನು ಬಳಸಿ ನಿಂದಿಸಿದ್ದ ಯುವಜನತೆಯನ್ನು ಕ್ಷಮಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ತಿಳಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಪ್ರಧಾನಿ ಮೋದಿಗೆ ಮರು ಪ್ರಶ್ನೆ ಹಾಕಿದ್ದಾರೆ.
ಪ್ರಧಾನಿಯವರು ಶುಕ್ರವಾರ ರಾತ್ರಿ ಪೋಸ್ಟ್ ಮಾಡಿದ ವೀಡಿಯೋಗೆ ಪ್ರತಿಕ್ರಿಯಿಸಿರುವ ದೀಪ್ಕೆ, “ಕೇವಲ ರೀಲ್ಸ್ ಮಾಡಿ ಕ್ಷಮಿಸುತ್ತೀರಾ ಅಥವಾ ವಿದ್ಯಾರ್ಥಿಗಳ ಮೇಲಿರುವ ಪ್ರಕರಣಗಳನ್ನು ನಿಜವಾಗಿಯೂ ಹಿಂಪಡೆಯುತ್ತೀರಾ?” ಎಂದು ಪ್ರಶ್ನಿಸಿದ್ದಾರೆ. ಪರೀಕ್ಷಾ ಪಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಾವು ಏರಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಪ್ರಕರಣಗಳು ಇದೀಗ ಸರ್ಕಾರದ ಹಾಗೂ ಪ್ರತಿಭಟನಾಕಾರರ ನಡುವಿನ ಹೊಸ ಸಂಘರ್ಷಕ್ಕೆ ಕಾರಣವಾಗಿವೆ.
‘ಎರಡು ಕಾನೂನುಗಳಿವೆಯೇ?’: ದೀಪ್ಕೆ ನೇರ ಸವಾಲು
ಪ್ರತಿಭಟನಾಕಾರರ ಮೇಲೆ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳನ್ನು ಬಲವಾಗಿ ಖಂಡಿಸಿರುವ ಸಿಜೆಪಿ, ದೇಶಾದ್ಯಂತ ವಿದ್ಯಾರ್ಥಿಗಳನ್ನು ಬೆದರಿಸಲಾಗುತ್ತಿದೆ ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದೆ. ಈ ಹಿಂದೆ ಬಿಜೆಪಿ ನಾಯಕರು ಹಾಗೂ ಅವರ ಐಟಿ ಸೆಲ್ ವಿವಿಧ ರಾಜಕೀಯ ನಾಯಕರ ಬಗ್ಗೆ, ಮಹಿಳೆಯರ ಬಗ್ಗೆ ಅತ್ಯಂತ ಕೀಳು ಭಾಷೆಯನ್ನು ಬಳಸಿ, ಅಶ್ಲೀಲ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದಾಗ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ, ಸಾಮಾನ್ಯ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸುತ್ತಿರುವುದೇಕೆ ಎಂದು ದೀಪ್ಕೆ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ಯಾಮೆರಾಮನ್ ಒಬ್ಬರ ವಿರುದ್ಧ ಬಳಸಿದ್ದ ಪದಗಳನ್ನು ನೆನಪಿಸಿದ ಅವರು, “ಈ ದೇಶದಲ್ಲಿ ನಾಯಕರಿಗೆ ಬೇರೆ ಹಾಗೂ ಯುವಜನತೆಗೆ ಬೇರೆ ಎಂಬಂತೆ ಎರಡು ಪ್ರತ್ಯೇಕ ಕಾನೂನುಗಳಿವೆಯೇ?” ಎಂದೂ ಕಿಡಿಕಾರಿದ್ದಾರೆ.
ಮುಂದುವರಿದ ಕಾನೂನು ಸಂಘರ್ಷ
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ 15 ವರ್ಷದ ಬಾಲಕಿಯ ವಿರುದ್ಧ ನೋಯ್ಡಾ ಪೊಲೀಸರು ಜೀರೋ ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಿದ್ದರು. ಇದರ ಬೆನ್ನಲ್ಲೇ ಆ ಬಾಲಕಿ ಕ್ಷಮೆಯಾಚಿಸಿ ವಿಡಿಯೋ ಬಿಡುಗಡೆ ಮಾಡಿದ್ದಳು. ಸಿಜೆಪಿ ವಕ್ತಾರ ಸೌರವ್ ದಾಸ್ ಈ ಬಗ್ಗೆ ಮಾತನಾಡಿ, “ಅಸಭ್ಯ ಭಾಷೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ, ಯುವಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತೋಟಿ ಮಾಡಲುತ್ನಿಸಿದಂತೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಈಗಾಗಲೇ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲದ ಅಪ್ರಾಪ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದರೂ, ಕೇಸ್‌ಗಳ ಹಿಂಪಡೆಯುವಿಕೆಯ ವಿಚಾರದಲ್ಲಿ ವಾಕ್ಸಮರ ಇನ್ನೂ ಮುಂದುವರಿದಿದೆ.



















