ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಮತ್ತೊಂದು ನಕಲಿ ಕಾರು ಲೋನ್ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಐದು ದಿನಗಳ ಹಿಂದಷ್ಟೇ ಜಗಳೂರಿನ ಸುರೇಶಯ್ಯ ಎಂಬುವರ ಹೆಸರಿನಲ್ಲಿ 8.40 ಲಕ್ಷ ಕಾರು ಸಾಲ ದಾಖಲಾಗಿರುವುದು ಪತ್ತೆಯಾಗಿದ್ದು, ಅದರ ತನಿಖೆ ನಡೆಯುತ್ತಿರುವ ನಡುವೆಯೇ ಇದೀಗ ಮತ್ತೊಂದು ಪ್ರಕರಣ ಬಹಿರಂಗವಾಗಿದೆ.

ಜಗಳೂರು ಮೂಲದ ಬಸವ ಕೀರಣ ಎಂಬುವರ ಹೆಸರಿನಲ್ಲಿ 5.70 ಲಕ್ಷ ಕಾರು ಸಾಲ ದಾಖಲಾಗಿರುವುದು ಸಿಬಿಲ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ದಾಖಲೆಗಳನ್ನು ಪರಿಶೀಲಿಸಿದಾಗ, ಅವರ ಪಾನ್ ಕಾರ್ಡ್ ಬಳಸಿ ಸಾಲ ಪಡೆಯಲಾಗಿದೆ ಎಂಬುದು ಗೊತ್ತಾಗಿದೆ. ಆದರೆ ತಾವು ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸಿಲ್ಲ. ತಮ್ಮ ಗಮನಕ್ಕೆ ಬಾರದೇ ತಮ್ಮ ಹೆಸರಿನಲ್ಲಿ ಸಾಲ ದಾಖಲಾಗಿದ್ದು, ತಮ್ಮ ದಾಖಲಾತಿಗಳನ್ನು ದುರುಪಯೋಗಪಡಿಸಿಕೊಂಡು ಯಾರೋ ನಕಲಿ ವ್ಯಕ್ತಿ ಸಾಲ ಪಡೆದಿದ್ದಾನೆ ಎಂದು ಬಸವ ಕೀರಣ ಆರೋಪಿಸಿದ್ದಾರೆ.
ಪ್ರಕರಣದ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದ್ದಾರೆ. ಈ ಹಿಂದೆ ಸುರೇಶಯ್ಯ ಹೆಸರಿನಲ್ಲಿ 8.40 ಲಕ್ಷ ಸಾಲ ದಾಖಲಾಗಿರುವ ಪ್ರಕರಣವೂ ಇದೇ ರೀತಿಯದ್ದಾಗಿದ್ದು, ಇದೀಗ ಎರಡನೇ ಪ್ರಕರಣವೂ ಬೆಳಕಿಗೆ ಬಂದಿರುವುದರಿಂದ ಜಗಳೂರಿನಲ್ಲಿ ನಕಲಿ ಸಾಲ ಜಾಲದ ಅನುಮಾನಗಳು ಮತ್ತಷ್ಟು ಗಾಢವಾಗಿವೆ. ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



















