ಕುಂದಾಪುರ : ನಗರದ ಹೋಲಿ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಶುಕ್ರವಾರ ನಸುಕಿನ ಜಾವ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿಯ ಬಂಧನಕ್ಕಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮೂರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೂಲತಃ ಹೆಬ್ರಿಯವರಾಗಿದ್ದು, ಪ್ರಸ್ತುತ ಬಾರ್ಕೂರಿನಲ್ಲಿ ವಾಸವಾಗಿದ್ದ ಐವನ್ ರಿಚರ್ಡ್ ಮಸ್ಕರೇನಸ್ (45) ಗುಂಡಿನ ದಾಳಿಗೆ ಬಲಿಯಾದವರು. ಹೆಮ್ಮಾಡಿ ಸಮೀಪದ ಕನ್ನಡಕುದ್ರು ನಿವಾಸಿ ಡೆರಿಕ್ ಕ್ರಾಸ್ತಾ ಗುಂಡಿಕ್ಕಿ ಹತ್ಯೆ ನಡೆಸಿದ ಬಳಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಧಮ್ ಇದ್ದರೆ ಕುಂದಾಪುರಕ್ಕೆ ಬಾ’
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಐವನ್ ಮತ್ತು ಡೆರಿಕ್ ನಡುವೆ ಹಣಕಾಸು ವ್ಯವಹಾರ ಸೇರಿದಂತೆ ಕೆಲವು ವಿಚಾರಗಳಿಗೆ ಸಂಬಂಧಿಸಿ ಮನಸ್ತಾಪವಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡೆರಿಕ್ ಐವನ್ಗೆ ಕರೆ ಮಾಡಿ ‘ಧಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ’ ಎಂದು ಸವಾಲು ಹಾಕಿದ್ದಲ್ಲದೆ, ತನ್ನ ಸ್ಥಳದ ಲೊಕೇಶನ್ ಕೂಡ ಕಳುಹಿಸಿದ್ದ ಎನ್ನಲಾಗಿದೆ. ಡೆರಿಕ್ ಕಳುಹಿಸಿದ್ದ ಲೊಕೇಶನ್ ಆಧರಿಸಿ ಐವನ್ ಅವರು ಕಳೆದ ಏಳು ವರ್ಷಗಳಿಂದ ತಮ್ಮೊಂದಿಗೆ ಇದ್ದ ಮಹಿಳೆಯೊಬ್ಬರೊಂದಿಗೆ ಕಾರಿನಲ್ಲಿ ಕುಂದಾಪುರಕ್ಕೆ ಬಂದಿದ್ದರು. ಬಳಿಕ ಹೋಲಿ ರೋಜಾರಿಯೋ ಚರ್ಚ್ ಎದುರಿನ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಡೆರಿಕ್ಗಾಗಿ ಕಾಯುತ್ತಿದ್ದರು ಎನ್ನಲಾಗಿದೆ.
ಥಾರ್ನಲ್ಲಿ ಬಂದ ಆರೋಪಿ : ಕ್ಷಣಾರ್ಧದಲ್ಲಿ ಗುಂಡಿನ ದಾಳಿ!
ಶುಕ್ರವಾರ ಮುಂಜಾನೆ ಸುಮಾರು 3.15ರ ವೇಳೆಗೆ ಡೆರಿಕ್ ಥಾರ್ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದಾನೆ. ಐವನ್ ಅವರ ಕಾರಿನ ಎದುರು ಥಾರ್ ನಿಲ್ಲಿಸಿದ ಡೆರಿಕ್, ಕಾರಿನಿಂದ ಕೆಳಗಿಳಿದು ಐವನ್ ಕಾರಿನಿಂದ ಇಳಿಯುತ್ತಿದ್ದಂತೆಯೇ ತನ್ನಲ್ಲಿದ್ದ ಗನ್ನಿಂದ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಐವನ್ ಅವರು ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಡೆರಿಕ್ ತನ್ನ ಥಾರ್ ಕಾರನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆರೋಪಿಗಾಗಿ ಮೂರು ವಿಶೇಷ ತಂಡಗಳ ಕಾರ್ಯಾಚರಣೆ :
ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿ ಡೆರಿಕ್ ಕ್ರಾಸ್ತಾನ ಪತ್ತೆಗಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಹಣಕಾಸು ವ್ಯವಹಾರವೇ ಗುಂಡಿನ ದಾಳಿಗೆ ಪ್ರಮುಖ ಕಾರಣವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಕುಂದಾಪುರದಲ್ಲಿ ಫೈರಿಂಗ್ ; ನಡುರಸ್ತೆಯಲ್ಲೇ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ!



















