ನವದೆಹಲಿ : ಇರಾನ್ ಹಾಗೂ ಅಮೆರಿಕ ನಡುವೆ ಕಳೆದ ನಾಲ್ಕು ತಿಂಗಳಿಂದ ನಡೆದ ಯುದ್ಧ ನಿಂತಿದೆ. ಶಾಂತಿ ಒಪ್ಪಂದದ ನಿಯಮಗಳನ್ನು ಜಾರಿಗೆ ತರಲು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ. ಇಂಧನ ಪೂರೈಕೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಕೂಡ ಮುಕ್ತವಾಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯೂ ಪ್ರತಿ ಬ್ಯಾರೆಲ್ ಗೆ 72 ಡಾಲರ್ ಗೆ ಕುಸಿದಿದೆ. ಇಷ್ಟಾದರೂ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗದಿರುವುದು ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು ಕುಸಿದಿದೆ ನಿಜ. ಮಧ್ಯಪ್ರಾಚ್ಯ ಬಿಕ್ಕಟ್ಟು ನಿಂತಿರುವ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಆದರೆ, ಭಾರತದಲ್ಲಿರುವ ತೈಲ ಮಾರುಕಟ್ಟೆ ಕಂಪನಿಗಳು ಯುದ್ಧದ ಸಂದರ್ಭದಲ್ಲಿ ಭಾರಿ ನಷ್ಟ ಅನುಭವಿಸಿವೆ. ಏಪ್ರಿಲ್-ಜೂನ್ ಅವಧಿಯಲ್ಲಿ ಕಂಪನಿಗಳಿಗೆ ಒಟ್ಟು 74,781 ಕೋಟಿ ರೂಪಾಯಿ ನಷ್ಟವಾಗಿದೆ. ಇದನ್ನು ಭರಿಸಿಕೊಳ್ಳಲು ಕಂಪನಿಗಳು ಮುಂದಾಗಿವೆ ಎಂದು ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕುರಿತು ಮಾತನಾಡಿದ ಅವರು, “ವಿಶ್ವದ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು ಜಾಸ್ತಿ ಇರುವಾಗ ಭಾರತವು ಖರೀದಿ ಮಾಡಿದೆ. ತೈಲ ಮಾರುಕಟ್ಟೆ ಕಂಪನಿಗಳು ಇನ್ನೂ 2 ತಿಂಗಳಿಗೆ ಆಗುವಷ್ಟು ಕಚ್ಚಾತೈಲವನ್ನು ಸಂಗ್ರಹ ಮಾಡಿಕೊಂಡಿವೆ. ಈ ತೈಲವನ್ನು ಗರಿಷ್ಠ ಬೆಲೆಗೆ ಖರೀದಿಸಲಾಗಿದೆ. ಇದನ್ನೇ ಈಗ ಸಂಸ್ಕರಣೆ ಮಾಡಲಾಗುತ್ತಿದೆ. ಹಳೆಯ ಕಚ್ಚಾತೈಲದ ಸ್ಟಾಕ್ ಮುಗಿದ ಬಳಿಕ ಬೆಲೆ ಇಳಿಕೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮುಂದಿನ 2 ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು 70 ಡಾಲರ್ ಇದ್ದರೆ ಮಾತ್ರ ಭಾರತದಲ್ಲಿ ಕೂಡ ಬೆಲೆ ಇಳಿಕೆ ಮಾಡಬಹುದು ಎಂಬುದು ಹರ್ದೀಪ್ ಸಿಂಗ್ ಪುರಿ ಅವರ ಅಭಿಪ್ರಾಯವಾಗಿದೆ. ಆದಾಗ್ಯೂ, ಕಳೆದ ಮೇ ತಿಂಗಳಲ್ಲಿ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ತಲಾ ಏಳೂವರೆ ರೂಪಾಯಿ ಜಾಸ್ತಿಯಾಗಿದೆ. ಎಲ್ ಪಿಜಿ ಸಿಲಿಂಡರ್ ದರವೂ ಏರಿಕೆಯಾಗಿದೆ. ಹಾಗಾಗಿ, ಜನ ಇಂಧನ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ : ಇ-ರಿಕ್ಷಾಗಳನ್ನು ರಿಮೋಟ್ ಮೂಲಕ ಲಾಕ್ ಮಾಡುವ ಚೀನಿ ಆ್ಯಪ್ ‘BAT-BMS’ಗೆ ಕೇಂದ್ರ ಸರ್ಕಾರ ನಿಷೇಧ!


















