ನವದೆಹಲಿ : ರಸ್ತೆಯಲ್ಲಿ ಚಲಿಸುವ ಲೀಥಿಯಂ ಬ್ಯಾಟರಿ ಚಾಲಿತ ಇ-ರಿಕ್ಷಾಗಳನ್ನು ಮೊಬೈಲ್ ಆ್ಯಪ್ ಮೂಲಕ ರಿಮೋಟ್ ಆಗಿ ಬಂದ್ ಮಾಡಿ ಚಾಲಕರಿಗೆ ವಂಚಿಸುತ್ತಿದ್ದ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ಚೀನಾ ಮೂಲದ ‘BAT-BMS‘(ಬಿಎಟಿ-ಬಿಎಂಎಸ್) ಸೇರಿದಂತೆ ಎರಡು ಮೊಬೈಲ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ತಕ್ಷಣವೇ ತೆಗೆದುಹಾಕಲು ಅದೇಶಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ತಂತ್ರಜ್ಞಾನದ ದುರುಪಯೋಗದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಕೆಲವು ಕಿಡಿಗೇಡಿಗಳು ಹಾಗೂ ಸಾಮಾಜಿಕ ಜಾಲತಾಣದ ಪ್ರಾಂಕ್ ಸ್ಟರ್‌ಗಳು ರಸ್ತೆಯಲ್ಲಿ ಹೋಗುವ ಇ-ರಿಕ್ಷಾಗಳನ್ನು ತಡೆದು, ಈ ಆ್ಯಪ್ ಮೂಲಕ ವಾಹನದ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗೆ ಕನೆಕ್ಟ್ ಮಾಡಿ ಇ-ರಿಕ್ಷಾಗಳನ್ನು ಅರ್ಧ ಹಾದಿಯಲ್ಲೇ ಸ್ಥಗಿತಗೊಳಿಸುತ್ತಿದ್ದರು. ಚಾಲಕರು ಅಸಹಾಯಕರಾಗಿ ತಬ್ಬಿಬ್ಬಾಗುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಇದು ಕೇವಲ ತಮಾಷೆಯಾಗಿ ಉಳಿಯದೆ ಇ-ರಿಕ್ಷಾ ಚಾಲಕರ ದೈನಂದಿನ ಜೀವನ ಮತ್ತು ಜೀವನೋಪಾಯಕ್ಕೆ ಕುತ್ತು ತಂದಿತ್ತು.
ದೆಹಲಿ ಸರ್ಕಾರದಿಂದ ತನಿಖೆಗೆ ಆದೇಶ
ಈ ವಿವಾದಾತ್ಮಕ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ದೆಹಲಿ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಲೀಥಿಯಂ ಬ್ಯಾಟರಿ ಹೊಂದಿರುವ ಇ-ರಿಕ್ಷಾಗಳನ್ನು ಆ್ಯಪ್ ಮೂಲಕ ರಿಮೋಟ್ ಆಗಿ ಲಾಕ್ ಮಾಡಿ ಚಾಲಕರನ್ನು ರಸ್ತೆಯಲ್ಲೇ ಸಿಲುಕಿಸುವಂತೆ ಮಾಡುತ್ತಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಾರಿಗೆ ಇಲಾಖೆ ಮತ್ತು ದೆಹಲಿ ಪೊಲೀಸರಿಗೆ ಸೂಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಸಾರಿಗೆ ಸಚಿವ ಪಂಕಜ್ ಸಿಂಗ್, ಸಾಮಾಜಿಕ ಮಾಧ್ಯಮಗಳ ಮೂಲಕ ಈ ಗಂಭೀರ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಮೊರಾದಾಬಾದ್‌ನಲ್ಲಿ ಇಂತಹದ್ದೇ ಘಟನೆಗೆ ಸಿಲುಕಿದ ಇ-ರಿಕ್ಷಾ ಚಾಲಕನೊಬ್ಬ ರಸ್ತೆಯಲ್ಲೇ ಕಣ್ಣೀರಿಟ್ಟಿದ್ದು, ಆ್ಯಪ್ ಅನ್ನು ತಕ್ಷಣ ನಿಷೇಧಿಸುವಂತೆ ಒತ್ತಾಯ ಹೆಚ್ಚಾಗಲು ಕಾರಣವಾಗಿತ್ತು.
ಉಜ್ಜಯಿನಿಯಲ್ಲಿ ವಂಚಕನ ಬಂಧನ
ಮತ್ತೊಂದೆಡೆ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇದೇ ಮಾದರಿಯ ಆ್ಯಪ್ ಬಳಸಿ ಇ-ರಿಕ್ಷಾಗಳನ್ನು ರಿಮೋಟ್ ಆಗಿ ಸ್ವಿಚ್ ಆಫ್ ಮಾಡಿ, ಬಳಿಕ ವಾಹನವನ್ನು ಅನ್‌ಲಾಕ್ ಮಾಡಿಕೊಡಲು ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಇಂಟರ್ನೆಟ್ ವಂಚಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆ್ಯಪ್ ಮೂಲಕ ಇ-ರಿಕ್ಷಾ ಬ್ಯಾಟರಿಗಳನ್ನು ಅಕ್ರಮವಾಗಿ ನಿಯಂತ್ರಿಸಿ ಚಾಲಕರಿಂದ ಹಣ ಪೀಕುವ ದೊಡ್ಡ ಜಾಲವೇ ಸಕ್ರಿಯವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಹಣಕಾಸು ವಂಚನೆ ಪ್ರಕರಣದ ಅಡಿಯಲ್ಲಿ ತನಿಖೆ ಮುಂದುವರಿದಿದೆ.
ಏನಿದು BAT-BMS ಆ್ಯಪ್?
ಮೂಲತಃ ‘BAT-BMS’ ಎಂಬುದು ಲೀಥಿಯಂ ಬ್ಯಾಟರಿ ಚಾಲಿತ ಇ-ರಿಕ್ಷಾಗಳಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ (BMS) ಅನ್ನು ಬ್ಲೂಟೂತ್ ಮೂಲಕ ಸಂಪರ್ಕಿಸುವ ಒಂದು ಮೊಬೈಲ್ ಅಪ್ಲಿಕೇಶನ್ ಆಗಿದೆ. ವಾಹನ ತಯಾರಕರು, ಡೀಲರ್‌ಗಳು ಮತ್ತು ತಂತ್ರಜ್ಞರು ಬ್ಯಾಟರಿಯ ಆರೋಗ್ಯ, ಚಾರ್ಜಿಂಗ್ ಸ್ಥಿತಿ ಮತ್ತು ತಾಂತ್ರಿಕ ದೋಷಗಳನ್ನು ಪತ್ತೆಹಚ್ಚಲು ಇದನ್ನು ಬಳಸುತ್ತಾರೆ. ಆದರೆ, ಇ-ರಿಕ್ಷಾಗಳಲ್ಲಿನ ಬ್ಲೂಟೂತ್ ಸುರಕ್ಷತೆಯ ದೋಷವನ್ನು ಬಳಸಿಕೊಂಡು ಕಿಡಿಗೇಡಿಗಳು ಇದರ ದುರುಪಯೋಗ ಪಡಿಸಿಕೊಂಡಿದ್ದರು. ಇದೀಗ ಕೇಂದ್ರ ಸರ್ಕಾರದ ನಿಷೇಧ ಆದೇಶದಿಂದ ಇ-ರಿಕ್ಷಾ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ.
ಇದೇ ವೇಳೆ, ಟಾಟಾ ಮೋಟಾರ್ಸ್ ಶೋರೂಮ್‌ನಲ್ಲಿ ನಡೆದ ಪ್ರಾತ್ಯಕ್ಷಿಕೆಯೊಂದರಲ್ಲಿ ಎಲೆಕ್ಟ್ರಿಕ್ ಕಾರುಗಳು (EV Cars) ಇಂತಹ ಸೈಬರ್ ದಾಳಿ ಅಥವಾ ಲೋಪಗಳಿಂದ ಸಂಪೂರ್ಣ ಸುರಕ್ಷಿತವಾಗಿವೆ ಎಂಬುದು ಸಾಬೀತಾಗಿದೆ. ಶೋರೂಮ್‌ನ ಉಪಾಧ್ಯಕ್ಷ ನೀರಜ್ ಮಿಶ್ರಾ ಅವರ ಪ್ರಕಾರ, ಇವಿ ಕಾರುಗಳಲ್ಲಿ ಅತ್ಯಾಧುನಿಕ ಹಾಗೂ ಎನ್‌ಕ್ರಿಪ್ಟ್ ಮಾಡಲಾದ ಕ್ಲೋಸ್ಡ್-ಲೂಪ್ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ ಇರುತ್ತದೆ. ಹೀಗಾಗಿ ಇವಿ ಕಾರುಗಳನ್ನು ಸಾಮಾನ್ಯ ಇ-ರಿಕ್ಷಾಗಳಂತೆ ಬ್ಲೂಟೂತ್ ಮೂಲಕ ಹ್ಯಾಕ್ ಮಾಡಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಡಿವೈಡರ್‌ಗೆ ಡಿಕ್ಕಿ ಹೊಡೆದ LPG ಟ್ಯಾಂಕರ್ – ಕ್ಷಣದಲ್ಲೇ ಸ್ಫೋಟ ; 5 ಸಾವು, ಭಯಾನಕ ವಿಡಿಯೋ ವೈರಲ್!


















