ನವದೆಹಲಿ : ಗಾಜಾ ಮೇಲಿನ ಇಸ್ರೇಲ್ ದಾಳಿಯ ಕುರಿತು ಭಾರತ ಸರ್ಕಾರದ ಮೌನವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬರೆದಿರುವ ಅಂಕಣವೊಂದು ಇದೀಗ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪ್ಯಾಲೆಸ್ತೀನ್ ಹಕ್ಕುಗಳ ಪರವಾದ ತನ್ನ ಐತಿಹಾಸಿಕ ನಿಲುವನ್ನು ಬದಿಗೊತ್ತಿ, ಇಸ್ರೇಲ್ ಜೊತೆಗಿನ ನಿಕಟ ಬಾಂಧವ್ಯಕ್ಕೆ ಭಾರತ ಆದ್ಯತೆ ನೀಡುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ, ವಿದೇಶಾಂಗ ನೀತಿಯಲ್ಲೂ ಕಾಂಗ್ರೆಸ್ ಸುಳ್ಳು ಮಾಹಿತಿ ಹರಡುತ್ತಿದ್ದು, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
‘ಗಾಜಾ ವಿಚಾರದಲ್ಲಿ ಭಾರತದ್ದೇ ಒಂಟಿ ಮೌನ’
ದಿನಪತ್ರಿಕೆಯೊಂದರ ಅಂಕಣದಲ್ಲಿ ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗದ ವರದಿಯನ್ನು ಉಲ್ಲೇಖಿಸಿರುವ ಸೋನಿಯಾ ಗಾಂಧಿ, ಗಾಜಾದಲ್ಲಿ ಇಸ್ರೇಲ್ ಪ್ಯಾಲೆಸ್ತೀನಿಯರ ವಿರುದ್ಧ ನರಮೇಧ ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಘರ್ಷದಲ್ಲಿ 20 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, 44 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಷ್ಟೆಲ್ಲಾ ಸಾಕ್ಷ್ಯಾಧಾರಗಳಿದ್ದರೂ ಅಂತಾರಾಷ್ಟ್ರೀಯ ಸಮುದಾಯ ಈ ರಕ್ತಪಾತವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿರುವ ಅವರು, ಗಾಜಾದಲ್ಲಿ ನಾಗರಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಭಾರತ ಸರ್ಕಾರ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ. ಪ್ರಪಂಚದಲ್ಲಿ ಭಾರತವು “ಮೌನದ ಒಂಟಿ ಧ್ವನಿ”ಯಾಗಿ (Lone voice of silence) ಉಳಿದಿದೆ. ಭಾರತದ ಈ ಮೌನವು ನೈತಿಕವಾಗಿ ಖಂಡನೀಯವಷ್ಟೇ ಅಲ್ಲ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದಲೂ ಸಮರ್ಥನೀಯವಲ್ಲ ಎಂದು ಅವರು ಹೇಳಿದ್ದಾರೆ. ಐತಿಹಾಸಿಕವಾಗಿ ಪ್ಯಾಲೆಸ್ತೀನ್‌ನ ಮಿತ್ರರಾಷ್ಟ್ರವಾಗಿದ್ದ ಭಾರತ, ಈಗ ಆ ನಿಲುವಿನಿಂದ ಹಿಂದೆ ಸರಿಯುತ್ತಿರುವುದು ಜಾಗತಿಕ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆ ತರುವ ಅಪಾಯವಿದೆ. ಕೂಡಲೇ ಸರ್ಕಾರ ಪ್ಯಾಲೆಸ್ತೀನ್ ಹಕ್ಕುಗಳ ಪರವಾಗಿ ಧ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ವಿದೇಶಾಂಗ ನೀತಿಯಲ್ಲೂ ವೋಟ್ ಬ್ಯಾಂಕ್ ಲೆಕ್ಕಾಚಾರ’
ಸೋನಿಯಾ ಗಾಂಧಿ ಅವರ ಅಂಕಣಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವು ವಿದೇಶಾಂಗ ನೀತಿಯ ವಿಷಯದಲ್ಲೂ ಕೇವಲ ವೋಟ್ ಬ್ಯಾಂಕ್ ರಾಜಕಾರಣವನ್ನು ಮಾತ್ರವೇ ನೆಚ್ಚಿಕೊಂಡಿದೆ ಎಂದು ಆರೋಪಿಸಿದೆ. ಗಾಜಾ ಮತ್ತು ಪ್ಯಾಲೆಸ್ತೀನ್ ವಿಚಾರದಲ್ಲಿ ಭಾರತವು ತನ್ನ ನಿಲುವನ್ನು ಹಲವು ಬಾರಿ ಸ್ಪಷ್ಟಪಡಿಸಿದೆ ಹಾಗೂ ಮಾನವೀಯ ನೆರವು ಕೂಡ ನೀಡಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಕದನ ವಿರಾಮದ ನಿರ್ಣಯಗಳ ಪರವಾಗಿ ಭಾರತ ಮತ ಚಲಾಯಿಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಯಾಲೆಸ್ತೀನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂಬುದನ್ನು ಅವರು ನೆನಪಿಸಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣದ ಕಾರಣಕ್ಕಾಗಿಯೇ ಕಾಂಗ್ರೆಸ್ ಎಂದಿಗೂ ಇಸ್ರೇಲ್ ಜೊತೆ ಉತ್ತಮ ಬಾಂಧವ್ಯ ಬೆಳೆಸಲಿಲ್ಲ ಹಾಗೂ ಹಮಾಸ್ ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವ ಆ ಪಕ್ಷ, ಇಸ್ರೇಲ್ ಮೇಲಿನ ದಾಳಿಯ ಬಗ್ಗೆ ಎಂದಿಗೂ ಚಕಾರ ಎತ್ತುವುದಿಲ್ಲ ಎಂದು ಪೂನಾವಾಲಾ ಟೀಕಿಸಿದ್ದಾರೆ. ಗಾಜಾದ ಮುಸ್ಲಿಮರ ಪರವಾಗಿ ಮಾತನಾಡುವ, ರಫಾ ಬಗ್ಗೆ ಟ್ವೀಟ್ ಮಾಡುವ ಸೋನಿಯಾ ಗಾಂಧಿ, ಢಾಕಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮಾತ್ರ ಮೌನ ವಹಿಸುತ್ತಾರೆ. ಇದು ಅವರ ದ್ವಂದ್ವ ನೀತಿ ಮತ್ತು ವಿದೇಶಾಂಗ ನೀತಿಯಲ್ಲೂ ಅವರು ಮಾಡುವ ವೋಟ್ ಬ್ಯಾಂಕ್ ಲೆಕ್ಕಾಚಾರವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ 3 ದಿನಗಳ ಸೆಶೆಲ್ಸ್ ಪ್ರವಾಸ ಆರಂಭ : ವಿಶ್ವದ ಅತ್ಯಂತ ಹಳೆಯ ಪ್ರಾಣಿಯ ಭೇಟಿಗೆ ಸಜ್ಜು


















