ಬೆಂಗಳೂರು : ತಿಲಕ್ ನಗರ ಠಾಣೆ ವ್ಯಾಪ್ತಿಯಲ್ಲಿ ನಕಲಿ ಚಿನ್ನದ ಬಿಲ್ಲೆಗಳನ್ನು ಕೊಟ್ಟು ಕಾರು ಡೀಲರ್‌ಗೆ 25 ಲಕ್ಷ ವಂಚನೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತಪ್ಪ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ 19.93 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಹರಪ್ಪನಹಳ್ಳಿಯ ಜಮೀನಿನಲ್ಲಿ ಬೋರ್ ಕೊರೆಸುವ ವೇಳೆ ಚಿನ್ನದ ಬಿಲ್ಲೆಗಳು ಸಿಕ್ಕಿದ್ದು, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ನಂಬಿಸಿ ಖದೀಮರು ಕಾರು ಡೀಲರ್‌ನ ಸಂಪರ್ಕಕ್ಕೆ ಬಂದಿದ್ದರು. ಮೊದಲಿಗೆ ನಂಬಿಕೆ ಮೂಡಿಸಲು 2 ಗ್ರಾಂ ಅಸಲಿ ಚಿನ್ನವನ್ನು ನೀಡಿದ್ದರು.
ತಿಲಕ್ ನಗರದ ಹೋಟೆಲ್‌ನಲ್ಲಿ ಭೇಟಿಯಾಗಿ ನೀಡಿದ್ದ 2 ಗ್ರಾಂ ಚಿನ್ನವನ್ನು ಬಂಗಾರದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅದು ಅಸಲಿಯೇ ಎಂಬುದು ದೃಢಪಟ್ಟಿತ್ತು. ಇದರಿಂದ ಖದೀಮರ ಮಾತನ್ನು ನಂಬಿದ ಕಾರು ಡೀಲರ್ ಮೊದಲ ಹಂತದಲ್ಲಿ 2 ಲಕ್ಷ ಮುಂಗಡ ಹಣ ನೀಡಿದ್ದರು.
ಕೆಲ ದಿನಗಳ ಬಳಿಕ ಒಂದೂವರೆ ಕೆಜಿ ಚಿನ್ನ ನೀಡುವುದಾಗಿ ಹೇಳಿದ ವಂಚಕರು, ಅದಕ್ಕಾಗಿ 25 ಲಕ್ಷ ಹಣ ಪಡೆದು ನಕಲಿ ಚಿನ್ನದ ಬಿಲ್ಲೆಗಳನ್ನು ನೀಡಿದ್ದಾರೆ. ಬಳಿಕ ಆ ಚಿನ್ನವನ್ನು ಮಾರಾಟ ಮಾಡಲು ಹೋದಾಗ ಅದು ನಕಲಿ ಎಂಬುದು ಬೆಳಕಿಗೆ ಬಂದಿದೆ.
ಮೋಸ ಹೋಗಿರುವುದನ್ನು ಅರಿತ ಕಾರು ಡೀಲರ್ ತಕ್ಷಣವೇ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಚಿತ್ರದುರ್ಗ ಜಿಲ್ಲೆಯ ಡಾಬಾ ಒಂದರ ಬಳಿ ಹನುಮಂತಪ್ಪನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 19.93 ಲಕ್ಷ ನಗದು ವಶಪಡಿಸಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಇನ್ನಿತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಬಂಡೀಪುರದಲ್ಲಿ ರಣಹದ್ದುಗಳ ದರ್ಶನ : ನಶಿಸುತ್ತಿರುವ ಪಕ್ಷಿಯ ಗುಂಪು ಕಂಡು ಪ್ರವಾಸಿಗರಲ್ಲಿ ಸಂತಸ



















