ನವದೆಹಲಿ : ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜೂನ್ ತಿಂಗಳಿನಿಂದ ದಿನಕ್ಕೆ ಸುಮಾರು 250 ದೇಶೀಯ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ಜಾಗತಿಕ ಮಟ್ಟದಲ್ಲಿ ಇಂಧನ ದರ ಏರಿಕೆ ಮತ್ತು ಪ್ರಯಾಣಿಕರ ಬೇಡಿಕೆಯಲ್ಲಿ ಇಳಿಮುಖವಾದ ಕಾರಣ ವಿಮಾನಯಾನ ಸಂಸ್ಥೆಗಳು ಈ ಕಠಿಣ ನಿರ್ಧಾರ ಕೈಗೊಂಡಿದ್ದು, ಮುಂಬರುವ ಜೂನ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ವಿಮಾನ ಟಿಕೆಟ್ ದರ ಮತ್ತಷ್ಟು ದುಬಾರಿಯಾಗುವ ಆತಂಕ ಎದುರಾಗಿದೆ.
ಬೆಂಗಳೂರು, ಮುಂಬೈ, ದೆಹಲಿ ಜನರಿಗೆ ತೀವ್ರ ಸಂಕಷ್ಟ
ವಿಮಾನಗಳ ಸಂಖ್ಯೆ ಕಡಿತದಿಂದಾಗಿ ದೇಶದ ಪ್ರಮುಖ ಉದ್ಯಮ ಮತ್ತು ಪ್ರವಾಸೋದ್ಯಮ ಕೇಂದ್ರಗಳಾದ ಬೆಂಗಳೂರು, ಮುಂಬೈ ಮತ್ತು ದೆಹಲಿ ನಗರಗಳು ಅತಿ ಹೆಚ್ಚು ಬಾಧಿತವಾಗಲಿವೆ. ಈ ನಗರಗಳಿಂದ ಹೊರಡುವ ಮತ್ತು ಇಲ್ಲಿಗೆ ಆಗಮಿಸುವ ಪ್ರಮುಖ ಮಾರ್ಗಗಳ ವಿಮಾನಗಳ ಸಂಚಾರದ ಆವರ್ತನವನ್ನು (ಫ್ರೀಕ್ವೆನ್ಸಿ) ಗಣನೀಯವಾಗಿ ಕಡಿಮೆ ಮಾಡಲಾಗಿದೆ.
ಬೆಂಗಳೂರಿನಿಂದ ದೆಹಲಿ ಮತ್ತು ಮುಂಬೈ ನಡುವಿನ ಜನನಿಬಿಡ ಮಾರ್ಗಗಳಲ್ಲದೆ, ಮುಂಬೈನಿಂದ ಜೈಪುರ, ಗೋವಾ, ಹೈದರಾಬಾದ್, ಚೆನ್ನೈ, ಅಹಮದಾಬಾದ್, ನಾಗ್ಪುರ ಹಾಗೂ ದೆಹಲಿಯಿಂದ ಲಕ್ನೋ, ಕೊಚ್ಚಿ ಮತ್ತು ಕೋಲ್ಕತ್ತಾಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆ ತಗ್ಗಲಿದೆ. ಇದರಿಂದಾಗಿ ಪೀಕ್ ಅವರ್‌ಗಳಲ್ಲಿ ಪ್ರಯಾಣಿಸುವವರಿಗೆ ಸೀಟುಗಳ ಲಭ್ಯತೆಯೂ ಕಡಿಮೆಯಾಗಲಿದ್ದು, ವಿಮಾನ ನಿಲ್ದಾಣಗಳಲ್ಲಿ ಭಾರೀ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ವಿಮಾನಗಳ ಸಂಖ್ಯೆ ಹಠಾತ್ ಕಡಿತಕ್ಕೆ ಕಾರಣವೇನು?
ದಿನನಿತ್ಯ ಸುಮಾರು 500 ದೇಶೀಯ ವಿಮಾನಗಳನ್ನು ಓಡಿಸುವ ಏರ್ ಇಂಡಿಯಾ ಜೂನ್ ಮತ್ತು ಜುಲೈನಲ್ಲಿ ತನ್ನ ಶೇ.22 ರಷ್ಟು ಕಾರ್ಯಾಚರಣೆ ಕಡಿತಗೊಳಿಸುತ್ತಿದ್ದು, ದಿನಕ್ಕೆ 110 ವಿಮಾನಗಳು ರದ್ದಾಗಲಿವೆ. ಹಾಗೆಯೇ, ನಿತ್ಯ 2200 ವಿಮಾನಗಳನ್ನು ನಿರ್ವಹಿಸುವ ಇಂಡಿಗೋ ತನ್ನ ಸಾಮರ್ಥ್ಯದಲ್ಲಿ ಶೇ.5ರಿಂದ 7 ರಷ್ಟು (ದಿನಕ್ಕೆ ಸುಮಾರು 110 ವಿಮಾನ) ಕಡಿತ ಮಾಡುತ್ತಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ತನ್ನ ಶೇ.10ರಷ್ಟು ವಿಮಾನಗಳನ್ನು ರದ್ದುಗೊಳಿಸುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಇಂಧನ (ATF) ದರ ಶೇ.25 ಕ್ಕಿಂತ ಹೆಚ್ಚು ದುಬಾರಿಯಾಗಿರುವುದು ಮತ್ತು ನಿರ್ವಹಣಾ ವೆಚ್ಚ ವಿಪರೀತವಾಗಿ ಹೆಚ್ಚಾಗಿರುವುದೇ ಈ ದಿಢೀರ್ ಕಡಿತಕ್ಕೆ ಮುಖ್ಯ ಕಾರಣ ಎಂದು ವಿಮಾನಯಾನ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಪ್ರವಾಸೋದ್ಯಮಕ್ಕೆ ಪೆಟ್ಟು
ಈಗಾಗಲೇ ದೇಶೀಯ ವಿಮಾನಯಾನ ದರಗಳು ಇತ್ತೀಚಿನ ವಾರಗಳಲ್ಲಿ ಶೇಕಡಾ 30 ರಷ್ಟು ಹೆಚ್ಚಾಗಿದ್ದು, ಇದರ ಜೊತೆಗೆ ಇಂಧನ ದರ ಏರಿಕೆಯ ಬಿಸಿಯನ್ನು ತಗ್ಗಿಸಲು ಸಂಸ್ಥೆಗಳು ಪ್ರತಿ ಪ್ರಯಾಣಿಕರ ಮೇಲೆ 400 ರಿಂದ 450 ರೂ.ಗಳ ಇಂಧನ ಹೆಚ್ಚುವರಿ ಶುಲ್ಕವನ್ನು (ಫ್ಯುಯೆಲ್ ಸರ್ಚಾರ್ಜ್) ಹೇರಿವೆ. ಪ್ರಸ್ತುತ ಸೀಟುಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತಿರುವುದರಿಂದ ಬೇಡಿಕೆ ಇರುವ ಮಾರ್ಗಗಳಲ್ಲಿ ಟಿಕೆಟ್ ದರಗಳು ಗಗನಕ್ಕೇರಲಿವೆ. ಸಾಂಪ್ರದಾಯಿಕವಾಗಿ ಕೌಟುಂಬಿಕ ರಜೆಗಳು ಮತ್ತು ಪ್ರವಾಸಗಳಿಗೆ ಇದು ಪ್ರಮುಖ ಸಮಯವಾಗಿರುವುದರಿಂದ, ಮಧ್ಯಮ ವರ್ಗದ ಪ್ರಯಾಣಿಕರಿಗೆ ವಿಮಾನಯಾನವು ಕೈಗೆಟುಕದಂತಾಗಲಿದೆ. ಪರಿಸ್ಥಿತಿ ಸುಧಾರಿಸಿದ ತಕ್ಷಣ ವಿಮಾನಗಳ ಸಂಚಾರವನ್ನು ಯಥಾಸ್ಥಿತಿಗೆ ತರುವುದಾಗಿ ಸಂಸ್ಥೆಗಳು ಭರವಸೆ ನೀಡಿದ್ದರೂ, ಮುಂದಿನ ಮೂರು ತಿಂಗಳುಗಳ ಕಾಲ ಪ್ರಯಾಣಿಸುವವರು ಮುಂಚಿತವಾಗಿಯೇ ಯೋಜಿಸುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ : ತ್ವಿಷಾ ಸಾವಿನ ಕೊನೆಯ ಕ್ಷಣಗಳ ರಹಸ್ಯ ಬೇಧಿಸಲು ಸಿಬಿಐನಿಂದ ‘ಟನಲ್ ವ್ಯೂ’ ತಂತ್ರಜ್ಞಾನ ಬಳಕೆ



















