ರಾಯಚೂರು : ಮಂತ್ರಾಲಯದ ಶ್ರೀಮಠದ ಆವರಣದಲ್ಲಿರುವ ಕಾರ್ಮಿಕರ ಶೆಡ್‌ಗಳಲ್ಲಿದ್ದ ಚಿಕ್ಕ ಚಿಕ್ಕ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಂತ್ರಾಲಯದ ನರಹರಿ ತೀರ್ಥ ವಸತಿ ಗೃಹಗಳ ಸಮೀಪ ನಿರ್ಮಾಣ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರಿಗೆ ಶೆಡ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಮಧ್ಯಾಹ್ನ ಅತಿಯಾದ ಬಿಸಿಲಿನ ತಾಪಕ್ಕೆ ಶೆಡ್‌ನಲ್ಲಿದ್ದ ಎರಡು-ಮೂರು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಇದರಿಂದಾಗಿ ಶೆಡ್‌ಗಳು ಹೊತ್ತಿ ಉರಿದಿದ್ದು, ಕಾರ್ಮಿಕರ ದವಸ-ಧಾನ್ಯ ಮತ್ತು ಇತರ ವಸ್ತುಗಳು ಸುಟ್ಟು ಕರಕಲಾಗಿವೆ.
ಘಟನಾ ಸ್ಥಳಕ್ಕೆ ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಘಟನೆಯ ಸಮಯದಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ನಷ್ಟಕ್ಕೊಳಗಾದ ಕಾರ್ಮಿಕರಿಗೆ ಶ್ರೀಮಠದ ವತಿಯಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು,” ಎಂದು ಶ್ರೀಗಳು ಹೇಳಿದ್ದಾರೆ.
ಇದನ್ನೂ ಓದಿ : ಬಾಲಕನ ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ ಪಣ – 3ನೇ ದಿನವೂ ಮುಂದುವರಿದ ಶೋಧ!


















