ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ಇಂದು ‘ಲೆಹ್ರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಿಸಿ) ಪ್ರತಿಭಟನೆಗೆ ಕರೆ ನೀಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜಿತ್ ದೀಪ್ಕೆ, ತಮ್ಮನ್ನು ದೆಹಲಿ ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರಲ್ಲದೆ, ಆದಾಗ್ಯೂ ರಾಷ್ಟ್ರಧ್ವಜ ಹಾರಿಸಲು ತಾವು ಜೈಲಿಗೆ ಹೋಗಲು ಸಿದ್ಧ ಎಂದು ಘೋಷಿಸುವ ಮೂಲಕ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ಗುಪ್ತಚರ ಬ್ಯೂರೋ ಸಿಬ್ಬಂದಿ ತಮ್ಮ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ ಮತ್ತು ನಂಬರ್ ಪ್ಲೇಟ್ ಇಲ್ಲದ ವಾಹನಗಳು ತಮ್ಮನ್ನು ಹಿಂಬಾಲಿಸುತ್ತಿವೆ ಎಂದು ದೀಪ್ಕೆ ಆರೋಪಿಸಿದ್ದಾರೆ. “ದೆಹಲಿ ಪೊಲೀಸರು ನನ್ನನ್ನು ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಬಂಧಿಸಬಹುದು. ಆದರೆ ನಾವು ಇದಕ್ಕೆ ಹೆದರುವುದಿಲ್ಲ. ನಾವು ಶಾಂತಿಯುತವಾಗಿ ತೆರಳಿ ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ. ಈ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಕ್ಕೂ ಜೈಲಿಗೆ ಹೋಗಬೇಕೆಂದರೆ, ಅದಕ್ಕೂ ನಾವು ಸಿದ್ಧ,” ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ
ತಮ್ಮ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಬಂಧನವನ್ನು ಪ್ರಸ್ತಾಪಿಸಿದ ದೀಪ್ಕೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಸ್ವತಂತ್ರ ಮತ್ತು ನಿಷ್ಪಕ್ಷವಾಗಿ ಹೊಸ ಚುನಾವಣಾ ಆಯುಕ್ತರನ್ನು ನೇಮಿಸಬೇಕೆಂಬುದು ಮಾತ್ರ ತಮ್ಮ ಆಗ್ರಹವಾಗಿದೆ ಎಂದ ಅವರು, ತಾವೇನೂ ಸರ್ಕಾರ ಬದಲಾವಣೆಗೆ ಕರೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾನಾಟ್ ಪ್ಲೇಸ್ನಲ್ಲಿ ಪೊಲೀಸ್ ಬಂದೋಬಸ್ತ್
ಸಿಜೆಪಿ ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು ಇಂದು ಮತ್ತು ನಾಳೆ ಮುಚ್ಚಲು ಎನ್ಡಿಎಮ್ಸಿ (NDMC) ನಿರ್ಧರಿಸಿದೆ. ಈ ನಿರ್ಧಾರವನ್ನು ಪ್ರಶ್ನಿಸಿರುವ ದೀಪ್ಕೆ, “ನಾವು ನಾಳೆ 100 ಕಡೆ ಧ್ವಜ ಹಾರಿಸುತ್ತೇವೆ ಎಂದರೆ ಎಲ್ಲ 100 ಸ್ಥಳಗಳನ್ನೂ ಮುಚ್ಚುತ್ತೀರಾ?” ಎಂದು ಕಿಡಿಕಾರಿದ್ದಾರೆ. ಕಾನಾಟ್ ಪ್ಲೇಸ್ ಸುತ್ತಮುತ್ತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸುಮಾರು 6,000 ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಮತ್ತೊಂದೆಡೆ, ಜಂತರ್ ಮಂತರ್ನಲ್ಲಿ ಅಕ್ರಮ ಪ್ರವೇಶ ಮತ್ತು ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿರುವ ಸಿಜೆಪಿ ನಾಯಕರ ಬೆಂಬಲಾರ್ಥವಾಗಿ ಮುಂಬೈನ ಆಜಾದ್ ಮೈದಾನದಲ್ಲೂ ಇಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಇದನ್ನೂ ಓದಿ:ಯುದ್ಧ ನಡೆದರೆ ಪಾಕ್ ಪರ ನಿಲ್ಲುತ್ತೇವೆ: ರಾಜಸ್ಥಾನ ಬಿಜೆಪಿ ಅಧ್ಯಕ್ಷರ ಹೇಳಿಕೆಗೆ ವಿಪಕ್ಷಗಳ ತೀವ್ರ ಆಕ್ರೋಶ!


















