ಜೈಪುರ: ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧವೇನಾದರೂ ಸಂಭವಿಸಿದರೆ, ನಮ್ಮ ನೆರೆಯ ದೇಶ ಎಂಬ ಕಾರಣಕ್ಕೆ ಭಾರತವು ಪಾಕಿಸ್ತಾನದ ಪರವಾಗಿ ನಿಲ್ಲಲಿದೆ ಎಂದು ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ನೀಡಿರುವ ಹೇಳಿಕೆ ದೇಶಾದ್ಯಂತ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ಹೇಳಿಕೆಗೆ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ (ಆಪ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿಯನ್ನು ದೇಶದ್ರೋಹಿ ಎಂದು ಜರೆದಿವೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್, “ನಾವು ಇದನ್ನು ಅರ್ಥಮಾಡಿಕೊಳ್ಳಬೇಕಿದೆ. ಇಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನ ನಮ್ಮ ನೆರೆಹೊರೆಯ ದೇಶವಾಗಿರುವುದರಿಂದ ನಾವು ಅದರ ಪರ ನಿಲ್ಲುತ್ತೇವೆ. ಆದರೆ ನಮ್ಮ ನಡುವಿನ ವಿಷಯ ಬಂದಾಗ, ನಾವು ನಮ್ಮ ದೇಶದ ಪರ ನಿಲ್ಲುತ್ತೇವೆ,” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವಿಪಕ್ಷಗಳು ತೀವ್ರ ವಾಗ್ದಾಳಿ ಆರಂಭಿಸಿವೆ.
ದೇಶದ್ರೋಹಿ ಹೇಳಿಕೆ: ಕಾಂಗ್ರೆಸ್, ಆಪ್ ತೀವ್ರ ದಾಳಿ
ಮದನ್ ರಾಥೋಡ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ರಾಥೋಡ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. “ನಮ್ಮ ಯೋಧರು ಮತ್ತು ಜನರನ್ನು ಕೊಲ್ಲುವ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಮೇಲಿನ ಬಿಜೆಪಿಯ ಪ್ರೀತಿ ಮತ್ತೊಮ್ಮೆ ಬಯಲಾಗಿದೆ. ಈ ದೇಶದ್ರೋಹಿಯ ವಿರುದ್ಧ ನರೇಂದ್ರ ಮೋದಿ ಮತ್ತು ಅಮಿತ್ ಶಾ ಏನು ಕ್ರಮ ಕೈಗೊಳ್ಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಆಮ್ ಆದ್ಮಿ ಪಾರ್ಟಿ ಕೂಡ ಈ ವಿಡಿಯೋ ಹಂಚಿಕೊಂಡು ಬಿಜೆಪಿಯ ರಾಷ್ಟ್ರಭಕ್ತಿಯನ್ನು ಪ್ರಶ್ನಿಸಿದೆ. “ಸಾಮಾನ್ಯ ಜನರು ಪ್ರಶ್ನೆ ಕೇಳಿದರೆ ಪಾಕಿಸ್ತಾನಿ ಎನ್ನುತ್ತೀರಿ, ಯುವಕರು ಧ್ವನಿ ಎತ್ತಿದರೆ ಭಯೋತ್ಪಾದಕರು ಎನ್ನುತ್ತೀರಿ. ಆದರೆ ಬಿಜೆಪಿ ನಾಯಕನೇ ಪಾಕಿಸ್ತಾನದ ಪರ ನಿಲ್ಲುವುದಾಗಿ ಹೇಳಿದಾಗ ಮೋದಿ ಅವರ ರಾಷ್ಟ್ರಭಕ್ತಿ ಎಲ್ಲಿ ಹೋಯಿತು?” ಎಂದು ಆಪ್ ಆಕ್ರೋಶ ವ್ಯಕ್ತಪಡಿಸಿದೆ.
ಬಯಸಿದ್ದು ಅದನ್ನಲ್ಲ, ಮಾತುಗಳನ್ನು ತಿರುಚಲಾಗಿದೆ: ನಾಯಕನ ಸ್ಪಷ್ಟನೆ
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮದನ್ ರಾಥೋಡ್ ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು ಅಸಾಂವಿಧಾನಿಕವಾಗಿ ಮತ್ತು ತಪ್ಪು ಸಂದರ್ಭಕ್ಕೆ ತಕ್ಕಂತೆ ತಿರುಚಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. “ನಾನು ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯದ ಸಂದರ್ಭವನ್ನು ಇಟ್ಟುಕೊಂಡು ಈ ಮಾತುಗಳನ್ನು ಹೇಳಿದ್ದೆ. ಪಂದ್ಯದಲ್ಲಿ ಭಾರತ ಸೋತಾಗ ಪಟಾಕಿ ಸಿಡಿಸುವವರು ದೇಶಭಕ್ತರಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದೆ. ಆದರೆ ಕೆಲವರು ನನ್ನ ಹೇಳಿಕೆಯ ಕೊನೆಯ ಎರಡು ಸಾಲುಗಳನ್ನು ಮಾತ್ರ ಕತ್ತರಿಸಿ ದುರುದ್ದೇಶಪೂರ್ವಕವಾಗಿ ಪ್ರಸಾರ ಮಾಡಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಪ್ರಶಾಂತ್ ಭೂಷಣ್ ‘ಸರ್ಕಾರ ಬದಲಾವಣೆ’ ಹೇಳಿಕೆ: ಬಿಜೆಪಿ ತೀವ್ರ ವಾಗ್ದಾಳಿ


















