ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ಬಾಲಕನ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮೂರನೇ ದಿನವೂ ಭಾರೀ ಕಾರ್ಯಾಚರಣೆ ಮುಂದುವರಿಸಿದೆ. ನರಹಂತಕ ಚಿರತೆಯನ್ನು ಪತ್ತೆಹಚ್ಚಲು ಚಿರತೆ ಕಾರ್ಯಪಡೆ ಸೇರಿದಂತೆ 70ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಚಿರತೆಯ ಚಲನವಲನ ಪತ್ತೆಹಚ್ಚಲು ಅರಣ್ಯ ಇಲಾಖೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿದೆ. ಥರ್ಮಲ್ ಡ್ರೋನ್ ಮೂಲಕ ಕಾಡು ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ರಾತ್ರಿ ವೇಳೆಯಲ್ಲೂ ಚಿರತೆಯ ಓಡಾಟದ ಸುಳಿವು ಪತ್ತೆ ಮಾಡಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ನಿನ್ನೆ ಬೆಳಗಿನ ಜಾವ ಚಿರತೆಯ ಓಡಾಟದ ದೃಶ್ಯ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದೆ. ಚಿರತೆ ಓಡಾಡಿದ ದೃಶ್ಯಗಳು ಲಭ್ಯವಾದ ಬಳಿಕ ಅರಣ್ಯ ಇಲಾಖೆ ಅದೇ ಪ್ರದೇಶದಲ್ಲಿ ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿದೆ. ಆದರೆ, ದೃಶ್ಯ ಸಿಕ್ಕ ಬಳಿಕ ಮತ್ತೆ ಚಿರತೆಯ ಸ್ಪಷ್ಟ ಸುಳಿವು ಪತ್ತೆಯಾಗಿಲ್ಲ.
ಚಿರತೆ ಓಡಾಡುತ್ತಿರುವ ಪ್ರದೇಶಗಳಲ್ಲಿ ಈಗಾಗಲೇ ನಾಲ್ಕು ಬೋನುಗಳನ್ನು ಅಳವಡಿಸಲಾಗಿದೆ. ಜೊತೆಗೆ ದೊಡ್ಡ ಗಾತ್ರದ ತುಮಕೂರು ಕೇಜ್ ಅಳವಡಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಕ್ಯಾಮೆರಾ ಟ್ರ್ಯಾಪ್ ದೃಶ್ಯಗಳ ಆಧಾರದ ಮೇಲೆ ಚಿರತೆಯನ್ನು ಸೆರೆ ಹಿಡಿಯಲು ವಿಶೇಷ ಪ್ಲ್ಯಾನ್ ರೂಪಿಸಲಾಗಿದೆ.
ಭಾರೀ ಕಾರ್ಯಾಚರಣೆ ನಡುವೆಯೂ ಚಿರತೆ ಅರಣ್ಯ ಸಿಬ್ಬಂದಿಗಳ ಕಣ್ತಪ್ಪಿಸಿ ಓಡಾಡುತ್ತಿರುವುದು ಆತಂಕ ಹೆಚ್ಚಿಸಿದೆ. ಚಿರತೆ ಕಾರ್ಯಪಡೆ ಹಾಗೂ ವನ್ಯಧಾಮ ಸಿಬ್ಬಂದಿ ನಿರಂತರ ನಿಗಾ ವಹಿಸಿದ್ದು, ಕಾಡು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಪಹರೆ ಮುಂದುವರಿದಿದೆ.
ಚಿರತೆ ದಾಳಿ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ನಾಗಮಲೆ ಪಾದಯಾತ್ರೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ಕಾಡು ಪ್ರದೇಶಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಮುನ್ನೆಚ್ಚರಿಕೆ ಕ್ರಮಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾ ಕಂಬ್ಯಾಕ್ ಲೆಕ್ಕಾಚಾರದಿಂದ ದೂರ : RCB ಪರ ಆರ್ಭಟಿಸುತ್ತಿರುವ ಭುವನೇಶ್ವರ್ ಯಶಸ್ಸಿನ ಗುಟ್ಟೇನು?


















