ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಕಳಂಕ ತರಲು ಯತ್ನಿಸಿದ್ದ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಅಜ್ಞಾತ ಸ್ಥಳದಲ್ಲಿ ಡಿಸಿಪಿ ರ್ಯಾಂಕ್ ಅಧಿಕಾರಿಯಿಂದ ಶಂಕಿತರ ತೀವ್ರ ವಿಚಾರಣೆ ನಡೆಯುತ್ತಿದ್ದು, ಈಗಾಗಲೇ ಇಬ್ಬರು ಅಪ್ರಾಪ್ತರ ವಿಚಾರಣೆ ಮುಗಿಸಿ ಪೊಲೀಸರು ಕಳುಹಿಸಿದ್ದಾರೆ. ಉಳಿದ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ಖುದ್ದು ಪೊಲೀಸ್ ಕಮಿಷನರ್ರಿಂದಲೇ ಪ್ರಕರಣದ ಮಾನಿಟರಿಂಗ್ ನಡೆಯುತ್ತಿದ್ದು, ವಿಚಾರಣೆ ಬಗ್ಗೆ ಪ್ರತಿಕ್ಷಣದ ಅಪ್ಡೇಟ್ ಪಡೆಯುತ್ತಿದ್ದಾರೆ. ವಿಡಿಯೋ ಅಪ್ಲೋಡ್ ಆಗಿದ್ದ ಅಕೌಂಟ್ನ ಐಪಿ ಅಡ್ರೆಸ್ ಮೂಲಕ ಶಂಕಿತರನ್ನು ಪತ್ತೆ ಮಾಡಲಾಗಿದೆ. ಅಪ್ಲೋಡ್ ಮಾಡಿದ್ದು ಯಾರು ಮತ್ತು ವಿಡಿಯೋ ಕೊಟ್ಟವರು ಯಾರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ಅಧಿಕಾರಿಗಳ ಪ್ರಶ್ನೆಗೆ ಶಂಕಿತರು ಸರಿಯಾಗಿ ಉತ್ತರಿಸುತ್ತಿಲ್ಲ. ವಿಡಿಯೋ ಸೂತ್ರಧಾರಿಯ ಪತ್ತೆಗಾಗಿ ಪೊಲೀಸರ ವಿಚಾರಣೆ ತೀವ್ರಗೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ದೂರಿನ ಅನ್ವಯ ಸಿಸಿಬಿ ಸೈಬರ್ ಕ್ರೈಂನಲ್ಲಿ ಎಫ್ಐಆರ್ ದಾಖಲಾಗಿದೆ.


















