ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ (ಸಿಇಒ) ಮನೋಜ್ ಅಗರ್ವಾಲ್ ಅವರನ್ನು ನೂತನ ಬಿಜೆಪಿ ಸರ್ಕಾರವು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಈ ಬೆಳವಣಿಗೆಯು ಇದೀಗ ಬಂಗಾಳದಲ್ಲಿ ಭಾರಿ ರಾಜಕೀಯ ಬಿರುಗಾಳಿ ಸೃಷ್ಟಿಸಿದ್ದು, ‘ಬಿಜೆಪಿ ತನ್ನ ಚುನಾವಣಾ ಕಳ್ಳತನವನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ’ ಎಂದು ಪ್ರತಿಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀವ್ರವಾಗಿ ವಾಗ್ದಾಳಿ ನಡೆಸಿದೆ.
2026ರ ಹೈ-ವೋಲ್ಟೇಜ್ ಬಂಗಾಳ ಚುನಾವಣೆಯಲ್ಲಿ ಚುನಾವಣಾ ಆಯೋಗದ ಪ್ರಮುಖ ಮುಖವಾಗಿದ್ದ ಮನೋಜ್ ಅಗರ್ವಾಲ್, ಮತಗಟ್ಟೆಗಳಿಂದ ಹಿಡಿದು ಸ್ಟ್ರಾಂಗ್ ರೂಮ್‌ವರೆಗಿನ ಎಲ್ಲಾ ಗೊಂದಲಗಳಿಗೂ ಗುರಾಣಿಯಾಗಿ ನಿಂತಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಪತನಗೊಂಡು, ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಇದೀಗ ಚುನಾವಣೆ ಮುಗಿದ ಬೆನ್ನಲ್ಲೇ, ನಿವೃತ್ತಿಗೆ ಕೇವಲ ಎರಡು ತಿಂಗಳು ಬಾಕಿ ಇರುವಾಗಲೇ ಅಗರ್ವಾಲ್ ಅವರನ್ನು ರಾಜ್ಯದ ಅತ್ಯುನ್ನತ ಅಧಿಕಾರಶಾಹಿ ಹುದ್ದೆಯಾದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ನಬನ್ನಾದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಮುಖ್ಯಮಂತ್ರಿಯ ಪಕ್ಕದಲ್ಲಿಯೇ ಅಗರ್ವಾಲ್ ಕುಳಿತಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಈ ಅಧಿಕೃತ ನೇಮಕಾತಿ ಆದೇಶ ಹೊರಬಿದ್ದಿದೆ. ಇದಕ್ಕೂ ಕೇವಲ 48 ಗಂಟೆಗಳ ಮೊದಲು, ವಿಶೇಷ ಚುನಾವಣಾ ವೀಕ್ಷಕರಾಗಿದ್ದ ಸುಬ್ರತಾ ಗುಪ್ತಾ ಅವರನ್ನು ಮುಖ್ಯಮಂತ್ರಿಯ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು.
ಇದು ನಾಚಿಕೆಗೇಡಿನ ಕೃತ್ಯ: ಟಿಎಂಸಿ ಆಕ್ರೋಶ
ಈ ನೇಮಕಾತಿಯನ್ನು ‘ನಾಚಿಕೆಗೇಡಿನ ಕೃತ್ಯ’ ಎಂದು ಬಣ್ಣಿಸಿರುವ ಟಿಎಂಸಿ, ಚುನಾವಣಾ ಪ್ರಕ್ರಿಯೆಯ ತಟಸ್ಥತೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಕಿಡಿಕಾರಿದ್ದು, ಚುನಾವಣೆ ನಡೆಸಿದ ಅಧಿಕಾರಿಯನ್ನು ಹೊಸ ಬಿಜೆಪಿ ಸರ್ಕಾರ ಮುಖ್ಯ ಕಾರ್ಯದರ್ಶಿಯನ್ನಾಗಿ ಮಾಡಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗವು ಚುನಾವಣೆಯನ್ನು ಕದ್ದಿರುವುದನ್ನು ಈಗ ಮುಕ್ತವಾಗಿ ಪ್ರದರ್ಶಿಸುತ್ತಿವೆ. ನ್ಯಾಯಾಲಯಗಳು ಕುರುಡಾಗಿವೆಯೇ ಅಥವಾ ಶಾಮೀಲಾಗಿವೆಯೇ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಕೂಡ ವಾಗ್ದಾಳಿ ನಡೆಸಿದ್ದು, ತಟಸ್ಥ ಅಂಪೈರ್ ಎಂದು ಕರೆಸಿಕೊಂಡಿದ್ದ ಅಧಿಕಾರಿಗೆ ಈಗ ಬಹುಮಾನ ಸಿಕ್ಕಿದೆ. 2026ರ ಬಂಗಾಳ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿವೆ ಎಂದು ಈಗಲೂ ಯಾರಾದರೂ ನಂಬುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆಯ ಭ್ರಷ್ಟಾಚಾರ ಪ್ರಕರಣ ಕೆದಕಿದ ಟಿಎಂಸಿ ನಾಯಕರು
ಚುನಾವಣಾ ಸಮಯದಲ್ಲಿಯೇ ಅಗರ್ವಾಲ್ ಅವರೊಂದಿಗೆ ಘರ್ಷಣೆಗಿಳಿದಿದ್ದ ಟಿಎಂಸಿ ನಾಯಕರು, ಇದೀಗ ಹಳೆಯ ಭ್ರಷ್ಟಾಚಾರದ ಆರೋಪಗಳನ್ನು ಮುನ್ನೆಲೆಗೆ ತಂದಿದ್ದಾರೆ. ಮಾಜಿ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಸಿಬಿಐ ಚಾರ್ಜ್‌ಶೀಟ್ ಅನ್ನು ಉಲ್ಲೇಖಿಸಿ, ಅಗರ್ವಾಲ್ ಅವರ ಪತ್ನಿಗೆ ಸೇರಿದ್ದು ಎನ್ನಲಾದ ಕೋಟ್ಯಂತರ ಮೌಲ್ಯದ 30 ಬ್ಯಾಂಕ್ ಖಾತೆಗಳು ಹಾಗೂ ದೆಹಲಿ, ಗುರ್‌ಗಾಂವ್ ಸೇರಿದಂತೆ 6 ಐಷಾರಾಮಿ ನಿವೇಶನಗಳ ಬಗ್ಗೆ ಆರೋಪಗಳಿದ್ದಾಗ ನಿಮ್ಮ ನೈತಿಕತೆ ಎಲ್ಲಿ ಹೋಗಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.
ನಿಯಮಗಳ ಪಾಲನೆ ಎಂದು ಬಿಜೆಪಿ ಸಮರ್ಥನೆ
ಟಿಎಂಸಿ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಬಿಜೆಪಿ, ರಾಜ್ಯದ ಅತ್ಯಂತ ಹಿರಿಯ ಐಎಎಸ್ ಅಧಿಕಾರಿಯನ್ನು ಆಯ್ಕೆ ಮಾಡುವ ಮೂಲಕ ನಾವು ಕೇವಲ ಸೇವಾ ನಿಯಮಗಳನ್ನು ಪಾಲಿಸಿದ್ದೇವೆ ಎಂದು ಸಮರ್ಥಿಸಿಕೊಂಡಿದೆ. 1990ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅಗರ್ವಾಲ್ ಜುಲೈ 31ರಂದು ನಿವೃತ್ತರಾಗಲಿದ್ದು, ಅವರಿಗೆ ಆರು ತಿಂಗಳ ಸೇವಾ ವಿಸ್ತರಣೆ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ : ‘ಮದ್ಯಮುಕ್ತ’ ತಮಿಳುನಾಡಿನತ್ತ ಸಿಎಂ ವಿಜಯ್ ಹೆಜ್ಜೆ : ಶಾಲೆ-ದೇಗುಲಗಳ ಬಳಿಯ 717 ಮದ್ಯದಂಗಡಿಗಳಿಗೆ ಬೀಗ!



















