ಬೆಳಗಾವಿ : ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದ್ದು, ಹುಟ್ಟುಹಬ್ಬದ ದಿನವೇ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಗರದ ಅಜಂ ನಗರದ ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತಳನ್ನು ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ್ ನಾಯಕ(21) ಎಂದು ಗುರುತಿಸಲಾಗಿದೆ. ಕಾವೇರಿ ಬಿಎಸ್ಸಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದು, ಉಜ್ವಲ ಭವಿಷ್ಯದ ಕನಸು ಕಂಡಿದ್ದ ವಿದ್ಯಾರ್ಥಿನಿ ದುರಂತ ಅಂತ್ಯ ಕಂಡಿದ್ದಾಳೆ.
ಜನ್ಮದಿನದ ಸಂಭ್ರಮದಲ್ಲಿರಬೇಕಿದ್ದ ದಿನವೇ ಕಾವೇರಿ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಬೆಚ್ಚಿಬೀಳಿಸಿದೆ. ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ.
ಕಾವೇರಿಗೆ ಮೂರು ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ನಡೆದಿತ್ತು ಎಂದು ತಿಳಿದುಬಂದಿದೆ. ಪೊಲೀಸ್ ಪೇದೆಯೊಬ್ಬರೊಂದಿಗೆ ಮದುವೆ ನಿಶ್ಚಯವಾಗಿದ್ದು, ಕುಟುಂಬದಲ್ಲಿ ಮದುವೆ ಸಿದ್ಧತೆಗಳು ಕೂಡ ನಡೆಯುತ್ತಿದವು ಎನ್ನಲಾಗಿದೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಮಗಳ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಹುಟ್ಟುಹಬ್ಬದ ದಿನವೇ ಮಗಳನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. APMC ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಬಂಗಾಳದಲ್ಲಿ ಚುನಾವಣಾಧಿಕಾರಿಯಾಗಿದ್ದವರು ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿ : ಟಿಎಂಸಿ ಆಕ್ರೋಶ!


















