ಬೆಂಗಳೂರು: ಜಾತಿನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ವಿಚಾರಣೆಗೆ ಗೈರಾದ ದಾವಣಗೆರೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಶಾಸಕರ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ.
ಪ್ರಕರಣದ ಹಿನ್ನೆಲೆ :
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಪಿ.ಹರೀಶ್ ಅವರನ್ನು ಅಭಿನಂದಿಸಲು 2023ರ ಮೇ 16ರಂದು ಹರಿಹರ ನಗರಸಭೆಯ ಪೌರಕಾರ್ಮಿಕರು ಹಾಗೂ ದಲಿತ ಸಮುದಾಯದ ಕೆಲ ಮುಖಂಡರು ಆಗಮಿಸಿದ್ದರು. ಈ ವೇಳೆ ಒಳಮೀಸಲಾತಿ ನೀಡಿದ್ದರೂ ನಿಮ್ಮ ಸಮಾಜದವರು ನಮ್ಮ ಪಕ್ಷವನ್ನು ಬೆಂಬಲಿಸಿಲ್ಲ, ನಿಮಗೆ ಕೃತಜ್ಞತೆಯಿಲ್ಲ ಎಂದು ಜಾತಿಯ ಹೆಸರನ್ನು ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು.
ಅದೇ ದಿನ ಸಮಾಜದ ಮುಖಂಡರೊಂದಿಗೆ ರಾಜಿ ಮಾತುಕತೆ ನಡೆದು ಶಾಸಕರು ಕ್ಷಮೆ ಕೇಳಿದ್ದರಿಂದ ವಿವಾದ ತಣ್ಣಗಾಗಿತ್ತು. ಆದರೆ, ಮರುದಿನ ಅಭಿನಂದನಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಹರೀಶ್, “ನಾನು ಆ ರೀತಿ ಹೇಳಿದ್ದು ನಿಜ ಮತ್ತು ಅದು ಸರಿಯಾಗಿಯೇ ಇದೆ” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಹನುಮಂತಪ್ಪ ಅವರು ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ : ಚುನಾವಣೆಯಲ್ಲಿ ನಾವು ಸೋತಿಲ್ಲ, ರಾಜೀನಾಮೆ ನೀಡೋ ಮಾತೇ ಇಲ್ಲ : ಮಮತಾ ಬ್ಯಾನರ್ಜಿ



















