ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಚುನಾವಣೆಗೆ ದಿನಾಂಕ ನಿಗದಿ ಮಾಡುವ ಪ್ರಕ್ರಿಯೆ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ರಾಜ್ಯ ಚುನಾವಣಾ ಆಯೋಗ ಮೇ 8ರಂದು ಪ್ರಮುಖ ಸಭೆ ಕರೆದಿದೆ.
ಜಿಬಿಎ ಕಾಯ್ದೆ 34(4)ರ ಅನ್ವಯ, ಪ್ರಾಧಿಕಾರದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಚುನಾವಣಾ ದಿನಾಂಕ ನಿಗದಿ ಪಡಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಮೇ 8ರಂದು ವಿಧಾನಸೌಧದಲ್ಲಿ ಜಿಬಿಎ ಎಲ್ಲಾ ಸದಸ್ಯರ ಸಭೆಯನ್ನು ಆಯೋಜಿಸಲಾಗಿದೆ. ಈಗಾಗಲೇ ವಾರ್ಡ್ ವಿಂಗಡಣೆ, ಮೀಸಲಾತಿ ಹಾಗೂ ಅಂತಿಮ ಮತದಾರರ ಪಟ್ಟಿ ಸಿದ್ಧಗೊಂಡಿದ್ದು, ಚುನಾವಣೆಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಆಯೋಗ ಪೂರ್ಣಗೊಳಿಸಿದೆ. ಸಭೆಗೆ ಸಂಬಂಧಿಸಿದ ಮಾಹಿತಿ ಈಗಾಗಲೇ ಜಿಬಿಎ ಸದಸ್ಯರಿಗೆ ನೀಡಲಾಗಿದೆ.
ಒಟ್ಟು 86 ಸದಸ್ಯರನ್ನು ಒಳಗೊಂಡಿರುವ ಜಿಬಿಎ ಸಮಿತಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಬಿಎ ಮುಖ್ಯ ಆಯುಕ್ತರು, ಐದು ನಗರಪಾಲಿಕೆ ಆಯುಕ್ತರು, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಶಾಸಕರು, ಲೋಕಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಇತರೆ ಅಧಿಕಾರಿಗಳು, ಶಾಸಕರು ಸೇರಿದ್ದಾರೆ.
ಸಭೆಯಲ್ಲಿ ಸದಸ್ಯರ ಸಲಹೆ ಮತ್ತು ಮನವಿಗಳನ್ನು ಸ್ವೀಕರಿಸಿದ ನಂತರ, ಚುನಾವಣಾ ದಿನಾಂಕವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಜಿಬಿಎ ಚುನಾವಣೆಗೆ ಸಂಬಂಧಿಸಿದ ಮುಂದಿನ ದಿಕ್ಕು ಈ ಸಭೆಯಲ್ಲೇ ನಿರ್ಧಾರವಾಗುವ ನಿರೀಕ್ಷೆ ಇದೆ.ಇನ್ನೂ ಚುನಾವಣೆ ಅಯೋಗ ಈಗಾಗಲೇ ಜೂನ್ ತಿಂಗಳಲ್ಲಿ ಎರಡು ದಿನಾಂಕವನ್ನು ನಿಗಧಿ ಮಾಡಿದ್ದು. ಸಭೆಯಲ್ಲಿ ದಿನಾಂಕ ನಿಗಧಿ ಬಗ್ಗೆ ಮಾಹಿತಿ ಪಡೆಯಲಿದೆ ಒಟ್ಟಿನಲ್ಲಿ, ಮೇ 8ರಂದು ನಡೆಯಲಿರುವ ಈ ಸಭೆಯನ್ನು ಜಿಬಿಎ ಚುನಾವಣೆಯ ದಿಕ್ಕು ತೋರಿಸುವ ಮಹತ್ವದ ಹೆಜ್ಜೆ ಎಂದು ಹೇಳಬಹುದು.
ಸಭೆಯಲ್ಲಿ ಚರ್ಚೆಯ ವಿಷಯ:
- ವಾರ್ಡುವಾರು ಮತದಾನ ಕೇಂದ್ರದ ಪಟ್ಟಿಯನ್ನು ಆಯೋಗದ ಅನುಮೋದನೆ ಪಡೆದು ಪ್ರಚರ ಪಡಿಸಿರುವ ಪ್ರಸ್ತಾವನೆ ಬಗ್ಗೆ
- ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಕುರಿತು.
- ಮತಗಟ್ಟೆ ಸಿಬ್ಬಂದಿ ನೇಮಕ ಮಾಡುವ ಬಗ್ಗೆ
- ಮತಗಟ್ಟೆ ಸಿಬ್ಬಂದಿಗಳ ತರಬೇತಿ ಬಗ್ಗೆ
- ಮತಪೆಟ್ಟಿಗೆಗಳ ಎತ್ತುವಳಿ, ಸಾಗಾಣಿಕೆ, ಸಂಗ್ರಹಣೆ ಸಂಬಂಧ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿರುವ ಕುರಿತು.
- ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸುವ ಕುರಿತು
- ಭದ್ರತಾ ಕೊಠಡಿ (Strong Room) ವ್ಯವಸ್ಥೆ 8- ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಹೋರ್ಡಿಂಗ್ ಹಾಕುವುದನ್ನು ನಿಷೇಧಿಸುವ ಕುರಿತು.
- ಚುನಾವಣಾ ಪ್ರಚಾರಕ್ಕಾಗಿ ಸಭೆ ನಡೆಸಲು ರಾಜಕೀಯ ಪಕ್ಷಗಳಗೆ ಅನುಮತಿ ನೀಡುವ ಕುರಿತು.
- ಸಾರ್ವಜನಿಕ ಆಸ್ತಿ-ಪಾಸ್ತಿ ವಿರೂಪಗೊಳಿಸದಿರುವ ಕುರಿತು.
ಈಗಾಗಲೇ ಸರ್ಕಾರಕ್ಕೆ 66 ಕೋಟಿ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡಲಾಗಿದೆ. ಸುಮಾರು 6 ಸಾವಿರ ಸಿಬ್ಬಂದಿಗಳು ಚುನಾವಣೆ ಕೆಲಸ, ಕಾರ್ಯಕ್ಕೆ ನೇಮಿಸಲು ಸಿದ್ದತೆ ನಡೆಸಿದ್ದಾರೆ. ಒಂದು ವೇಳೆ ಸಭೆಯಲ್ಲಿ ಚುನಾವಣೆಗೆ ಎಲ್ಲರೂ ಗ್ರೀನ್ ಸಿಗ್ನಲ್ ನೀಡಿದ್ರೆ ಮೇ ಮೂರನೇ ವಾರ ಚುನಾವಣಾ ಆಯೋಗ ಜಿಬಿಎ ಚುನಾವಣೆಗೆ ದಿನಾಂಕ ನಿಗಧಿ ಮಾಡಿ ನೋಟಿಪಿಕೇಷನ್ ಹೊರಡಿಸಲಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಇದನ್ನೂ ಓದಿ ; ನಕಲಿ VIP ಲೆಟರ್‌ಹೆಡ್ ಬಳಸಿ IPL ಟಿಕೆಟ್ ಬ್ಲ್ಯಾಕ್ ದಂಧೆ – ಖದೀಮರ ಜಾಲ ಭೇದಿಸಿದ ಪೊಲೀಸರು!



















