ನೋಯ್ಡಾ: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ (ನೋಯ್ಡಾ) ಜಿಲ್ಲೆಯಲ್ಲಿ ಕಳೆದ ವಾರ ನಡೆದಿದ್ದ ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆಯ ಪ್ರಮುಖ ಸಂಚುಕೋರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಮಾಸ್ಟರ್‌ಮೈಂಡ್ ಆದಿತ್ಯ ಆನಂದ್ ಎಂಬವರನ್ನು ತಮಿಳುನಾಡಿನ ತಿರುಚಿರಾಪಳ್ಳಿ ರೈಲ್ವೆ ನಿಲ್ದಾಣದಲ್ಲಿ ಗೌತಮ್ ಬುದ್ಧ ನಗರ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದೆ.
ಕಾರ್ಮಿಕ ಚಳವಳಿಯ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಆದಿತ್ಯ ಆನಂದ್ ವಿರುದ್ಧ ನೋಯ್ಡಾದ ಫೇಸ್-2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ನಂತರ ಆದಿತ್ಯ ತಲೆಮರೆಸಿಕೊಂಡಿದ್ದರಿಂದ, ಪೊಲೀಸರು ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಸ್ಥಳೀಯ ನ್ಯಾಯಾಲಯವು ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಕೂಡ ಹೊರಡಿಸಿತ್ತು.
ರೈಲ್ವೆ ನಿಲ್ದಾಣದಲ್ಲಿ ಬಂಧನ
ಆರೋಪಿಗಾಗಿ ಹಲವು ರಾಜ್ಯಗಳಲ್ಲಿ ಶೋಧ ನಡೆಸುತ್ತಿದ್ದ ಪೊಲೀಸ್ ತಂಡಗಳಿಗೆ ಈತ ತಮಿಳುನಾಡಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು, ತಿರುಚಿರಾಪಳ್ಳಿ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಸುತ್ತುವರೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಕಾರ್ಮಿಕರ ಧರಣಿ ಮತ್ತು ಪ್ರದರ್ಶನಗಳ ವೇಳೆ ಹಿಂಸಾಚಾರ ಉಲ್ಬಣಗೊಳ್ಳುವಂತೆ ಪ್ರಚೋದನಕಾರಿ ಚಟುವಟಿಕೆಗಳನ್ನು ಈತನೇ ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆದಿತ್ಯ ಆನಂದ್‌ನನ್ನು ಈಗ ನೋಯ್ಡಾಕ್ಕೆ ಕರೆತರುವ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾರ್ಮಿಕ ಸಂಘಟನೆಗಳ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮತ್ತು ಶಾಂತಿ ಕದಡುವ ಯತ್ನಗಳಿಗೆ ಈ ಬಂಧನವು ಒಂದು ದೊಡ್ಡ ಎಚ್ಚರಿಕೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಭಾಗೀದಾರರ ಬಗ್ಗೆಯೂ ತನಿಖೆ ಮುಂದುವರಿದಿದೆ.
ನೆರೆಯ ಹರ್ಯಾಣ ರಾಜ್ಯದಲ್ಲಿ ಕಾರ್ಮಿಕರ ವೇತನವನ್ನು ಸರ್ಕಾರ ಪರಿಷ್ಕರಣೆ ನಡೆಸಿದ ಮಾದರಿಯಲ್ಲೇ ಉತ್ತರಪ್ರದೇಶ ಸರ್ಕಾರವೂ ಕಾರ್ಮಿಕರ ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿ ಕಳೆದ ವಾರ ನೋಯ್ಡಾದ ಕಾರ್ಮಿಕರು ದಿಢೀರ್ ಬೀದಿಗಿಳಿದಿದ್ದರು. ಈ ಪ್ರತಿಭಟನೆಯ ಕೆಲವೇ ಗಂಟೆಗಳಲ್ಲಿ ಹಿಂಸಾರೂಪಕ್ಕೆ ತಿರುಗಿತ್ತಲ್ಲದೆ, ಪ್ರತಿಭಟನಾಕಾರರ ಆಕ್ರೋಶಕ್ಕೆ ಪೊಲೀಸ್ ವಾಹನಗಳು ಸೇರಿದಂತೆ ಹಲವಾರು ವಾಹನಗಳು ಆಹುತಿಯಾಗಿದ್ದವು. ಅನೇಕ ಕಟ್ಟಡಗಳ ಮೇಲೆ ಕಲ್ಲುತೂರಾಟವೂ ನಡೆದಿತ್ತು.
ಇದನ್ನೂ ಓದಿ: ಪತಿ ಜತೆ ಅಕ್ರಮ ಸಂಬಂಧದ ಶಂಕೆ : ಪತಿಯ ಕಚೇರಿ ಸಿಬ್ಬಂದಿಯನ್ನು ಬರ್ಬರವಾಗಿ ಕೊಂದ ವಕೀಲನ ಪತ್ನಿ!


















