ಭುವನೇಶ್ವರ: ದೇಶದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2026’ರ 61ನೇ ಆವೃತ್ತಿಯು ಶನಿವಾರ ರಾತ್ರಿ ವರ್ಣರಂಜಿತವಾಗಿ ತೆರೆಕಂಡಿದೆ. ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿ, ಗೋವಾ ಮೂಲದ ಮಾಡೆಲ್ ಸಾಧ್ವಿ ಸತೀಶ್ ಸೈಲ್ ನೂತನ ‘ಮಿಸ್ ಇಂಡಿಯಾ ವರ್ಲ್ಡ್‘ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಾಧ್ವಿ ಈ ಐತಿಹಾಸಿಕ ಸಾಧನೆ ಮಾಡಿದ್ದು, ಈಗ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕೇವಲ ಗ್ಲಾಮರ್ ಲೋಕಕ್ಕೆ ಮಾತ್ರ ಸೀಮಿತವಾಗದ ಸಾಧ್ವಿ ಸತೀಶ್ ಸೈಲ್, ಸಾಮಾಜಿಕ ಕಳಕಳಿಯ ವ್ಯಕ್ತಿತ್ವದ ಮೂಲಕವೂ ಗುರುತಿಸಿಕೊಂಡಿದ್ದಾರೆ. ದಶಕಗಳಿಂದಲೂ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇವರು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ಶ್ರವಣ ಮತ್ತು ವಾಕ್ ದೋಷವಿರುವ ಬಾಲಕಿಯರ ಹಿತರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಫಿಟ್‌ನೆಸ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಸಾಧ್ವಿ, ಇನ್ಸ್ಟಾಗ್ರಾಮ್‌ನಲ್ಲೂ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಿಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯಲ್ಲಿ ಸಾಧ್ವಿ ಅವರು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು.
ರನ್ನರ್-ಅಪ್‌ಗಳು ಯಾರು?
ಸ್ಪರ್ಧೆಯ ಅಂತಿಮ ಹಂತದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮಹಾರಾಷ್ಟ್ರದ ರಾಜನಂದಿನಿ ಪವಾರ್ ಅವರು ಪ್ರಥಮ ರನ್ನರ್-ಅಪ್ ಸ್ಥಾನ ಪಡೆದರು. ಇನ್ನು ಜಮ್ಮು ಮತ್ತು ಕಾಶ್ಮೀರದ ಡಾ. ಶ್ರೀ ಅದ್ವೈತಾ ಅವರು ದ್ವಿತೀಯ ರನ್ನರ್-ಅಪ್ ಆಗಿ ಆಯ್ಕೆಯಾದರು. ಇನ್ನು, ವಿನ್ಯಾಸಕಿ ವಜಾನೆಹ್ ವಿನ್ಯಾಸಗೊಳಿಸಿದ ಬೆಳ್ಳಿಯ ಬಣ್ಣದ ಮಿನುಗುವ ಗೌನ್‌ನಲ್ಲಿ ಮಿಂಚಿದ ಸಾಧ್ವಿ, ತಮ್ಮ ಆತ್ಮವಿಶ್ವಾಸದ ಮಾತುಗಳಿಂದ ತೀರ್ಪುಗಾರರ ಮನಗೆದ್ದರು.

“ನನ್ನ ಸ್ಪರ್ಧೆ ನನ್ನೊಂದಿಗೇ”: ಸಾಧ್ವಿ ಮಾತು
ಗೆಲುವಿನ ನಂತರ ಮಾತನಾಡಿದ ಸಾಧ್ವಿ, “ಒಂದು ಸಣ್ಣ ಪಟ್ಟಣದಿಂದ ಜಾಗತಿಕ ವೇದಿಕೆಗೆ ಬಂದಾಗ ನನಗೆ ನನ್ನ ಬಗ್ಗೆಯೇ ಹಲವು ಅನುಮಾನಗಳಿದ್ದವು. ಇತರರ ಯಶಸ್ಸನ್ನು ಕಂಡು ನನ್ನ ಸಾಮರ್ಥ್ಯವನ್ನು ಪ್ರಶ್ನಿಸಿಕೊಳ್ಳುತ್ತಿದ್ದೆ. ಆದರೆ ಯಾವಾಗ ನಾನು ಇತರ ಮಹಿಳೆಯರೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದನ್ನು ಬಿಟ್ಟು, ಅವರನ್ನು ಬೆಂಬಲಿಸಲು ಆರಂಭಿಸಿದೆನೋ ಅಂದಿನಿಂದ ನನ್ನ ಆಲೋಚನಾ ಕ್ರಮವೇ ಬದಲಾಯಿತು” ಎಂದು ಹೇಳಿಕೊಂಡಿದ್ದಾರೆ. ಭಾರತದ ಸಂಕಲ್ಪ ಮತ್ತು ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವುದು ತಮಗೆ ಸಿಕ್ಕ ಗೌರವ ಎಂದು ಅವರು ಹೇಳಿದ್ದಾರೆ.



















