ಟೆಹ್ರಾನ್ : ಇತ್ತೀಚೆಗೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ನಡೆದಿದ್ದ ಸಂಧಾನ ಮಾತುಕತೆ ವಿಫಲವಾದ ನಂತರ ತಾಯ್ನಾಡಿಗೆ ಮರಳುತ್ತಿದ್ದ ಇರಾನ್ ನಿಯೋಗವು ತೀವ್ರ ಭದ್ರತಾ ಭೀತಿಯನ್ನು ಎದುರಿಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಇಸ್ಲಾಮಾಬಾದ್‌ನಿಂದ ಟೆಹ್ರಾನ್‌ಗೆ ಮರಳುವ ಮಾರ್ಗಮಧ್ಯೆ ತಮ್ಮ ವಿಮಾನದ ಮೇಲೆ ದಾಳಿಯಾಗುವ ಆತಂಕ ಎದುರಾದ ಹಿನ್ನೆಲೆಯಲ್ಲಿ, ನಿಯೋಗವು ರಹಸ್ಯವಾಗಿ ವಿಮಾನ ಬದಲಿಸಿ, ಬಳಿಕ ಬಸ್ ಮತ್ತು ರೈಲಿನ ಮೂಲಕ ಪ್ರಯಾಣ ಬೆಳೆಸಿತ್ತು ಎಂಬ ಆಘಾತಕಾರಿ ಘಟನೆ ವರದಿಯಾಗಿದೆ.
ದಾಳಿ ಭೀತಿಯಿಂದ ಮಾರ್ಗ ಬದಲಾವಣೆ
ಲೆಬನಾನ್‌ನ ಸುದ್ದಿ ಸಂಸ್ಥೆ ‘ಅಲ್-ಮಯಾದೀನ್’ಗೆ ಮಾಹಿತಿ ನೀಡಿರುವ ಇರಾನಿನ ರಾಜಕೀಯ ವಿಶ್ಲೇಷಕ ಹಾಗೂ ಟೆಹ್ರಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಹಮ್ಮದ್ ಮರಂಡಿ ಈ ಸ್ಫೋಟಕ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್-ಬಾಘರ್ ಘಲಿಬಾಫ್ ಸೇರಿದಂತೆ ಉನ್ನತ ಮಟ್ಟದ ನಿಯೋಗವು ಅಮೆರಿಕದೊಂದಿಗಿನ ಮಾತುಕತೆಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ತೆರಳಿತ್ತು.
ಈ ನಿಯೋಗದ ಜೊತೆಗಿದ್ದ ಮರಂಡಿ, “ಇಸ್ಲಾಮಾಬಾದ್‌ಗೆ ತೆರಳುವಾಗಲೇ ನಮ್ಮ ವಿಮಾನದ ಮೇಲೆ ದಾಳಿಯಾಗುವ ಬಗ್ಗೆ ನೇರ ಬೆದರಿಕೆಗಳು ಬಂದಿದ್ದವು. ಹೀಗಾಗಿ ತೀವ್ರ ಎಚ್ಚರಿಕೆ ವಹಿಸಿದ್ದ ನಿಯೋಗವು, ಟೆಹ್ರಾನ್‌ಗೆ ಮರಳುವಾಗ ಮಾರ್ಗಮಧ್ಯೆ ರಹಸ್ಯವಾಗಿ ವಿಮಾನವನ್ನು ಬದಲಾಯಿಸಿತು” ಎಂದು ವಿವರಿಸಿದ್ದಾರೆ. ದಿಢೀರ್ ಮಾರ್ಗ ಬದಲಿಸಿದ ವಿಮಾನವು ಇರಾನ್‌ನ ಮಶಾದ್ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಅಲ್ಲಿಂದ ಭದ್ರತೆಯ ದೃಷ್ಟಿಯಿಂದ ನಿಯೋಗದ ಸದಸ್ಯರು ರೈಲು, ಕಾರು ಮತ್ತು ಬಸ್ ಮೂಲಕ ರಾಜಧಾನಿ ಟೆಹ್ರಾನ್ ತಲುಪಿದರು ಎಂದು ಅವರು ತಿಳಿಸಿದ್ದಾರೆ.
ಅಮೆರಿಕದ ವಂಚನೆಯ ಬಗ್ಗೆ ಅರಿವಿದೆ ಎಂದ ಇರಾನ್
ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಅಮೆರಿಕದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮರಂಡಿ, “ನಮಗೆ ಅಮೆರಿಕದ ಮೇಲೆ ಯಾವುದೇ ನಂಬಿಕೆಯಿಲ್ಲ. ನಾವು ಮುಂದಿನ ಹಂತದ ಯುದ್ಧಕ್ಕಾಗಿ ನಮ್ಮನ್ನು ನಾವು ಸಜ್ಜುಗೊಳಿಸುವಲ್ಲಿ ನಿರತರಾಗಿದ್ದೇವೆ” ಎಂದು ಹೇಳಿದ್ದಾರೆ. ಮಾತುಕತೆಯ ಮೇಜಿನಲ್ಲಿದ್ದಾಗಲೂ ಇರಾನ್ ತನ್ನ ಮಿಲಿಟರಿ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುತ್ತಿದೆ ಎಂದಿರುವ ಅವರು, ಅಮೆರಿಕದ ವಂಚನೆಯ ಬುದ್ಧಿಯ ಬಗ್ಗೆ ಇರಾನ್‌ಗೆ ಮೊದಲಿನಿಂದಲೂ ಅರಿವಿದೆ ಎಂದಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಮತ್ತೆ ಮಾತುಕತೆ ಸಾಧ್ಯತೆ
ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಶಾಂತಿ ಮಾತುಕತೆ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಕದನ ವಿರಾಮ ಘೋಷಣೆಯಾದ ನಾಲ್ಕು ದಿನಗಳ ನಂತರ ನಡೆದ ಈ ಸಭೆಯು ಅಪೂರ್ಣಗೊಂಡಿದ್ದರೂ, ಅಮೆರಿಕ ಮತ್ತು ಇರಾನ್ ಸಮಾಲೋಚನಾ ತಂಡಗಳು ಈ ವಾರಾಂತ್ಯದಲ್ಲಿ ಮತ್ತೆ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಎರಡನೇ ಸುತ್ತಿನ ಮಾತುಕತೆಗೆ ಇರಾನ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಮಾತುಕತೆ ಪುನರಾರಂಭಿಸುವ ಪ್ರಸ್ತಾವನೆಯನ್ನು ಈಗಾಗಲೇ ರವಾನಿಸಲಾಗಿದ್ದು, ಈ ವಾರಾಂತ್ಯದಲ್ಲಿ ಉಭಯ ದೇಶಗಳ ನಿಯೋಗಗಳು ಇಸ್ಲಾಮಾಬಾದ್‌ನಲ್ಲಿ ಮತ್ತೆ ಮುಖಾಮುಖಿಯಾಗುವ ನಿರೀಕ್ಷೆಯಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ, ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ನಡುವೆ ನಡೆದ ಅತ್ಯುನ್ನತ ಮಟ್ಟದ ನೇರ ಮಾತುಕತೆ ಇದಾಗಿದೆ ಎಂಬುದು ಗಮನಾರ್ಹ.
ಇದನ್ನೂ ಓದಿ : ದಯಾಮರಣ ಕೊರಿದ್ದ ಮಹಿಳೆಗೆ ಗೃಹ ಸಚಿವರಿಂದ ಭರವಸೆಯ ಮಾತು..!



















