ಕಠ್ಮಂಡು : ಕಳೆದ ವರ್ಷ ದೇಶಾದ್ಯಂತ ನಡೆದಿದ್ದ ಜನರೇಷನ್ ಝಡ್ (ಝೆನ್ ಜಿ) ಪ್ರೋಟೆಸ್ಟ್ ಸಂಬಂಧ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸಲಾಗಿದೆ. ಪ್ರತಿಭಟನೆಗಳಲ್ಲಿ ಭಾಗಿಯಾಗಿರುವುದು ಹಾಗೂ ಅವುಗಳನ್ನು ಹತ್ತಿಕ್ಕಿದ ಕ್ರಮಗಳ ಹಿನ್ನೆಲೆಯಲ್ಲಿ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಪ್ರಧಾನಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ, ಗೌರಿಬಹಾದೂರ್ ಕರ್ಕಿ ನೇತೃತ್ವದ ತನಿಖಾ ಆಯೋಗವು ಭದ್ರಾ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳನ್ನು ಹತ್ತಿಕ್ಕಿದ ವಿಚಾರದಲ್ಲಿ ಓಲಿ ಮತ್ತು ಲೇಖಕ್ ಸೇರಿದಂತೆ ಹಲವರನ್ನು ತಪ್ಪಿತಸ್ಥರೆಂದು ಘೋಷಿಸಿದೆ.
ತನಿಖಾ ಆಯೋಗವು ಇದೇ ವೇಳೆ ನೇಪಾಳ ಪೊಲೀಸ್‌ನ ಇನ್ಸ್‌ಪೆಕ್ಟರ್ ಜನರಲ್ ಚಂದ್ರ ಕುಬೇರ್ ಖಪುಂಗ್ ಸೇರಿದಂತೆ ಇತರ ಉನ್ನತ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ.
ಇಂದು ಬೆಳಗ್ಗೆ ಇಬ್ಬರನ್ನೂ ಬಂಧಿಸಲಾಗಿದ್ದು, ಕಾನೂನು ಪ್ರಕಾರ ಕ್ರಮ ಮುಂದುವರಿಯಲಿದೆ ಎಂದು ಕಠ್ಮಂಡು ಕಣಿವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧನದ ಬಳಿಕ ಪ್ರತಿಕ್ರಿಯೆ ನೀಡಿದ ಹಾಲಿ ಗೃಹ ಸಚಿವ ಸುಡಾನ್ ಗುರುಂಗ್, “ಕಾನೂನಿಗಿಂತ ಯಾರೂ ಮೇಲಲ್ಲ. ಇದು ಸೇಡು ತೀರಿಸಿಕೊಳ್ಳುವ ಕ್ರಮವಲ್ಲ, ನ್ಯಾಯದ ಆರಂಭ ಮಾತ್ರ” ಎಂದು ಹೇಳಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರತಿಭಟನೆ ಹಿನ್ನೆಲೆ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ಕ್ರಮ ವಿರೋಧಿಸಿ ಯುವಕರಿಂದ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ನಂತರ ಸರ್ಕಾರ ನಿಷೇಧವನ್ನು ಹಿಂತೆಗೆದುಕೊಂಡರೂ ಹೋರಾಟ ತೀವ್ರಗೊಂಡಿದ್ದು, ಅದರ ನಡುವೆ ಪ್ರಧಾನಿ ಆಗಿದ್ದ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬೆಳವಣಿಗೆಗಳು ನೇಪಾಳದ ರಾಜಕೀಯದಲ್ಲಿ ಹೊಸ ತಿರುವು ನೀಡುವ ಸಾಧ್ಯತೆ ಇದೆ.



















