ನವದೆಹಲಿ : ಜಾಗತಿಕ ರಾಜಕೀಯದಲ್ಲಿ ಮಿತ್ರ ಮತ್ತು ಶತ್ರುಗಳ ನಡುವಿನ ಗೆರೆಗಳು ಅಸ್ಪಷ್ಟವಾಗುತ್ತಿರುವ ಈ ಕಾಲಘಟ್ಟದಲ್ಲಿ, ಭಾರತವು ಅತ್ಯಂತ ಚತುರತೆಯ ರಾಜತಾಂತ್ರಿಕ ಹೆಜ್ಜೆಯನ್ನಿಟ್ಟಿದೆ. ಒಂದು ಕಡೆ ಇಸ್ರೇಲ್‌ನೊಂದಿಗೆ ಆಪ್ತ ರಕ್ಷಣಾ ಸಂಬಂಧವನ್ನು ಹೊಂದಿದ್ದರೂ, ಮತ್ತೊಂದೆಡೆ ಯುದ್ಧ ಪೀಡಿತ ಇರಾನ್‌ಗೆ ಭಾರತವು ಜೀವರಕ್ಷಕ ಔಷಧಗಳನ್ನೊಳಗೊಂಡ ಮಾನವೀಯ ನೆರವನ್ನು ರವಾನಿಸಿದೆ. ಮಾರ್ಚ್ 18ರಂದು ಭಾರತವು ಕಳುಹಿಸಿದ ಈ ವೈದ್ಯಕೀಯ ನೆರವಿಗೆ ಇರಾನ್ ರಾಯಭಾರ ಕಚೇರಿಯು “ಭಾರತದ ಜನರು ಅತ್ಯಂತ ದಯಾಳುಗಳು” ಎಂದು ಕೃತಜ್ಞತೆ ಸಲ್ಲಿಸಿದೆ.
ಪ್ರಸ್ತುತ ಪರ್ಷಿಯನ್ ಕೊಲ್ಲಿಯಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಇರಾನ್‌ನ ಸಾಮಾನ್ಯ ನಾಗರಿಕರು ತತ್ತರಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತವು ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದೆ. ಈ ಕ್ರಮವು ಕೇವಲ ಮಾನವೀಯತೆಯ ದೃಷ್ಟಿಕೋನ ಮಾತ್ರವಲ್ಲದೆ, ಭಾರತದ ಸ್ವತಂತ್ರ ವಿದೇಶಾಂಗ ನೀತಿಯ ಪ್ರತಿಬಿಂಬವೂ ಆಗಿದೆ. ಅಂತಾರಾಷ್ಟ್ರೀಯ ತಜ್ಞರ ಪ್ರಕಾರ, ಭಾರತವು ಯಾವುದೇ ಒಂದು ಬಣಕ್ಕೆ ಸೇರದೆ ತನ್ನದೇ ಆದ ಹಿತಾಸಕ್ತಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇರಾನ್‌ಗೆ ನೆರವು ನೀಡುವ ಮೂಲಕ ಆ ಪ್ರಾಂತ್ಯದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವುದು ಭಾರತದ ಉದ್ದೇಶವಾಗಿದೆ.
ಇಸ್ರೇಲ್ ಸಂಬಂಧದ ಮೇಲೆ ಪರಿಣಾಮ ಬೀರದು
ಭಾರತವು ಇರಾನ್‌ಗೆ ಸಹಾಯ ಮಾಡುತ್ತಿರುವುದು ಇಸ್ರೇಲ್‌ನೊಂದಿಗಿನ ಸಂಬಂಧಕ್ಕೆ ಧಕ್ಕೆಯುಂಟು ಮಾಡಬಹುದೇ ಎಂಬ ಪ್ರಶ್ನೆಗೆ ತಜ್ಞರು ನಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಓ.ಪಿ. ಜಿಂದಾಲ್ ಗ್ಲೋಬಲ್ ಯುನಿವರ್ಸಿಟಿಯ ಪ್ರೊಫೆಸರ್ ಮೊಹ್ಸಿನ್ ರಜಾ ಖಾನ್ ಅವರ ಪ್ರಕಾರ, ಇಸ್ರೇಲ್ ತನ್ನ ಒಟ್ಟು ಶಸ್ತ್ರಾಸ್ತ್ರ ರಫ್ತಿನ ಶೇಕಡಾ 34 ರಷ್ಟನ್ನು ಭಾರತಕ್ಕೇ ನೀಡುತ್ತಿದೆ. ಇಂತಹ ಬೃಹತ್ ರಕ್ಷಣಾ ಪಾಲುದಾರಿಕೆಯನ್ನು ಕೇವಲ ಮಾನವೀಯ ನೆರವಿನ ಕಾರಣಕ್ಕೆ ಇಸ್ರೇಲ್ ಕೈಬಿಡಲು ಸಾಧ್ಯವಿಲ್ಲ. ಭಾರತವು ಇಸ್ರೇಲ್ ಪರವಾಗಿ ಯುದ್ಧ ಮಾಡುತ್ತಿಲ್ಲ, ಬದಲಾಗಿ ಜೀವ ಉಳಿಸುವ ಕೆಲಸ ಮಾಡುತ್ತಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಒಂದು ವೇಳೆ ಭಾರತ ಈ ನೆರವು ನೀಡದಿದ್ದರೆ ಇರಾನ್ ಅನಿವಾರ್ಯವಾಗಿ ಚೀನಾದಂತಹ ರಾಷ್ಟ್ರಗಳ ಮೊರೆ ಹೋಗುತ್ತಿತ್ತು, ಇದು ಭಾರತಕ್ಕೆ ವ್ಯೂಹಾತ್ಮಕವಾಗಿ ನಷ್ಟವಾಗುತ್ತಿತ್ತು ಎನ್ನಲಾಗಿದೆ.
ಚಾಬಹಾರ್ ಬಂದರು ಮತ್ತು ಆರ್ಥಿಕ ಹಿತಾಸಕ್ತಿ
ಇರಾನ್ ಜೊತೆಗಿನ ಈ ಮೃದು ಧೋರಣೆಯ ಹಿಂದೆ ಭಾರತದ ದೀರ್ಘಕಾಲದ ಆರ್ಥಿಕ ಹಿತಾಸಕ್ತಿಗಳಿವೆ. ಇರಾನ್‌ನಲ್ಲಿರುವ ಚಾಬಹಾರ್ ಬಂದರಿನ ಕಾರ್ಯಾಚರಣೆಯನ್ನು ಭಾರತವು 10 ವರ್ಷಗಳ ಒಪ್ಪಂದದಡಿ ವಹಿಸಿಕೊಂಡಿದೆ. ಪಾಕಿಸ್ತಾನವನ್ನು ಬದಿಗೊತ್ತಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಸಂಪರ್ಕ ಸಾಧಿಸಲು ಈ ಬಂದರು ಭಾರತಕ್ಕೆ ಅತಿ ಮುಖ್ಯವಾಗಿದೆ. ಇದಕ್ಕಾಗಿ ಭಾರತ ಸುಮಾರು 1,000 ಕೋಟಿ ರೂಪಾಯಿಗಳ ಹೂಡಿಕೆ ಮಾಡಿದೆ. ಅಲ್ಲದೆ, 7,200 ಕಿಲೋಮೀಟರ್ ಉದ್ದದ ಅಂತರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಮೂಲಕ ರಷ್ಯಾ ಮತ್ತು ಯುರೋಪ್‌ಗೆ ಸರಕು ಸಾಗಿಸಲು ಇರಾನ್‌ನ ಸಹಕಾರ ಭಾರತಕ್ಕೆ ಅನಿವಾರ್ಯವಾಗಿದೆ.
ಇಂಧನ ಭದ್ರತೆ ಮತ್ತು ಸುಗಮ ಸಾಗಣೆ
ಯುದ್ಧದ ವಾತಾವರಣದ ನಡುವೆಯೂ ಭಾರತದ ತೈಲ ಮತ್ತು ಅನಿಲ ಟ್ಯಾಂಕರ್‌ಗಳು ಹೊರ್ಮುಜ್ ಜಲಸಂಧಿಯ ಮೂಲಕ ಸುಗಮವಾಗಿ ಸಾಗಲು ಇರಾನ್‌ನೊಂದಿಗೆ ಉತ್ತಮ ಸಂಬಂಧ ಹೊಂದುವುದು ಅತ್ಯಗತ್ಯ. ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದಿನ ಮೇಲೆ ಭಾರತದ ಆರ್ಥಿಕತೆ ಅವಲಂಬಿತವಾಗಿದ್ದು, ಇರಾನ್ ಈ ಭಾಗದಲ್ಲಿ ಭಾರತಕ್ಕೆ ಭದ್ರತೆಯ ಭರವಸೆ ನೀಡಿದೆ. ಹೀಗಾಗಿ, ಉಕ್ರೇನ್‌ನಂತಹ ರಾಷ್ಟ್ರಗಳು ಅಮೆರಿಕಕ್ಕೆ ಡ್ರೋನ್ ತಂತ್ರಜ್ಞಾನ ನೀಡಿ ಯುದ್ಧದಲ್ಲಿ ನೆರವಾಗುತ್ತಿದ್ದರೂ, ಭಾರತ ಮಾತ್ರ ‘ಶಾಂತಿ ಮತ್ತು ನೆರವು’ ಎಂಬ ತನ್ನದೇ ಆದ ವಿಶಿಷ್ಟ ರಾಜತಾಂತ್ರಿಕ ಹಾದಿಯಲ್ಲಿ ಸಾಗುತ್ತಿದೆ.
ಇದನ್ನೂ ಓದಿ : ಎಂಗೇಜ್ಮೆಂಟ್ ಆದವಳ ಎದೆಯನ್ನೇ ಸೀಳಿ ಕ್ರೌರ್ಯ ಮೆರೆದ ಪಾಪಿ!



















