ಘಾಜಿಯಾಬಾದ್ : ಕೇವಲ 4 ವರ್ಷದ ಮಗುವಿನ ಮೇಲೆ ನೆರೆಮನೆಯ 24 ವರ್ಷದ ಯುವಕನೇ ಅತ್ಯಾಚಾರ ಎಸಗಿ, ಬಳಿಕ ಸಾಕ್ಷ್ಯ ನಾಶಪಡಿಸಲು ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಈ ಪೈಶಾಚಿಕ ಕೃತ್ಯ ಎಸಗಲಾಗಿದೆ.
ದಿನಗೂಲಿ ಕಾರ್ಮಿಕನಾದ ಬಾಲಕಿಯ ತಂದೆ ಕೆಲಸ ಮುಗಿಸಿ ಸಂಜೆ 7 ಗಂಟೆಗೆ ಮನೆಗೆ ಬಂದಾಗ ಮಗಳು ಕಾಣೆಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಸುತ್ತಮುತ್ತಲ ಮಕ್ಕಳನ್ನು ವಿಚಾರಿಸಿದಾಗ, ಬಾಲಕಿಯನ್ನು ನೆರೆಮನೆಯ ಯುವಕ ಚಾಕೊಲೇಟ್ ಕೊಡಿಸುವುದಾಗಿ ಕರೆದೊಯ್ದಿದ್ದ ಎಂದಿದ್ದಾರೆ. ತಕ್ಷಣವೇ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ ಸುಮಾರು 8:45ರ ಸುಮಾರಿಗೆ ನಿರ್ಜನ ಪ್ರದೇಶದ ಹೊಲವೊಂದರಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಮಗಳ ಬಗ್ಗೆ ವಿಚಾರಿಸಿದಾಗ ಆತ ಸ್ಥಳವನ್ನು ತೋರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಹೊಲದಲ್ಲಿ ಪತ್ತೆಯಾದ ರಕ್ತಸಿಕ್ತ ದೇಹ
ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಪೊದೆಗಳ ನಡುವೆ ಬಾಲಕಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಬಾಲಕಿಯ ತಾಯಿ 2022ರಿಂದಲೇ ಕುಟುಂಬದಿಂದ ಬೇರೆಯಾಗಿದ್ದು, ತಂದೆ ಕೆಲಸಕ್ಕೆ ಹೋದಾಗ ಹಿರಿಯ ಸಹೋದರರೇ ತಂಗಿಯ ಆರೈಕೆ ಮಾಡುತ್ತಿದ್ದರು. ಕೆಲಸದ ಅನಿವಾರ್ಯತೆಯಿಂದ ತಂದೆ ಹೊರಹೋದ ಸಮಯ ನೋಡಿಕೊಂಡು ಕಾಮುಕ ಈ ಹೀನ ಕೃತ್ಯವೆಸಗಿದ್ದಾನೆ.
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಕ್ರೌರ್ಯ
ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯು ಆರೋಪಿಯ ರಾಕ್ಷಸೀ ಪ್ರವೃತ್ತಿಯನ್ನು ಬಯಲು ಮಾಡಿದೆ. ಬಾಲಕಿಯ ದೇಹದ ಮೇಲೆ ಒಟ್ಟು 11 ಗಾಯಗಳಾಗಿದ್ದು, ತಲೆಯ ಮೇಲೆ ಇಟ್ಟಿಗೆಯಿಂದ ಬಲವಾಗಿ ಹೊಡೆಯಲಾಗಿದೆ. ದೇಹದ ಮೇಲೆ ಕಚ್ಚಿದ ಗುರುತುಗಳು, ಕುತ್ತಿಗೆ ಹಿಸುಕಿದ ಕುರುಹುಗಳು ಹಾಗೂ ಖಾಸಗಿ ಅಂಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದು ವರದಿಯಲ್ಲಿ ದೃಢಪಟ್ಟಿದೆ. ತನ್ನ ಕೃತ್ಯ ಯಾರಿಗೂ ತಿಳಿಯಬಾರದು ಎಂಬ ಉದ್ದೇಶದಿಂದ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆಯೇ ಐದು ವಿಶೇಷ ತಂಡಗಳನ್ನು ರಚಿಸಿದ ಘಾಜಿಯಾಬಾದ್ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಆತನ ಮನೆಯ ಸಮೀಪವೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ವಿರುದ್ಧ ಬಿಎನ್ಎಸ್ (BNS) ಸೆಕ್ಷನ್ 103 (ಕೊಲೆ), 238 (ಸಾಕ್ಷ್ಯ ನಾಶ) ಹಾಗೂ ಪೋಕ್ಸೋ (POCSO) ಕಾಯ್ದೆ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯು ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : ಧೈರ್ಯವಿದ್ರೆ ಎನ್‌ಕೌಂಟರ್ ಮಾಡಿ ಎಂದು ಪೊಲೀಸರಿಗೇ ಸವಾಲು ಹಾಕಿದ್ದ ಗ್ಯಾಂಗ್‌ಸ್ಟರ್ ಎನ್‌ಕೌಂಟರ್‌ಗೆ ಬಲಿ!


















