ಪುಣೆ : ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಭಾವಿ ಪತಿ ಕೇತನ್ ಅಗರ್ವಾಲ್‌ನನ್ನು ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಅವರ ಪೋಷಕರು ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ಮತ್ತು ದುಃಖವನ್ನು ಹೊರಹಾಕಿದ್ದಾರೆ. ತನಿಖೆಯಲ್ಲಿ ಒಂದು ವೇಳೆ ನಮ್ಮ ಮಗಳು ಸಿಯಾ ತಪ್ಪಿತಸ್ಥಳೆಂದು ಸಾಬೀತಾದರೆ, ಕೇತನ್‌ನನ್ನು ಯಾವ ಕೋಟೆಯಿಂದ ಕೆಳಗೆ ತಳ್ಳಿ ಸಾಯಿಸಲಾಗಿದೆಯೋ, ಅದೇ ಜಾಗದಿಂದ ಆಕೆಯನ್ನೂ ಕೆಳಗೆ ತಳ್ಳಿ ಕಠಿಣ ಶಿಕ್ಷೆ ವಿಧಿಸಲಿ ಎಂದು ಸಿಯಾ ಪೋಷಕರು ಕಣ್ಣೀರಿಡುತ್ತಲೇ ಹೇಳಿಕೆ ನೀಡಿದ್ದಾರೆ.

ಕೇತನ್ ನಮ್ಮ ಹೆತ್ತ ಮಗನಂತಿದ್ದ!
ಸುದ್ದಿಗಾರರೊಂದಿಗೆ ಮಾತನಾಡಿದ ಸಿಯಾಳ ತಂದೆ ಪ್ರವೀಣ್ ಗೋಯಲ್, “ಕೇತನ್ ಅಗರ್ವಾಲ್ ಕೇವಲ ನಮ್ಮ ಅಳಿಯನಲ್ಲ, ಆತ ನಮಗೆ ಮಗನಿದ್ದಂತೆ. ನಮ್ಮ ಮನೆಯ ನವೀಕರಣ ಕೆಲಸ ನಡೆಯುವಾಗ ತಾನೇ ಮುಂದೆ ನಿಂತು ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿಲ್ಲ, ಅಷ್ಟು ಒಳ್ಳೆಯ ಹುಡುಗನಾಗಿದ್ದ. ಅಗರ್ವಾಲ್ ಕುಟುಂಬದವರು ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ, ಅವರ ಜೊತೆಗೆ ನಾವು ಕೂಡ ನಮ್ಮ ಪ್ರೀತಿಯ ಮಗನನ್ನು ಕಳೆದುಕೊಂಡಿದ್ದೇವೆ. ಈ ಘಟನೆಯನ್ನು ನಮಗೆ ಇನ್ನು ಕೂಡ ನಂಬಲು ಸಾಧ್ಯವಾಗುತ್ತಿಲ್ಲ,” ಎಂದು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಪ್ರೇಮಿ ಚೇತನ್ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ
ಸಿಯಾಳ ತಾಯಿ ಪೂಜಾ ಗೋಯಲ್ ಮಾತನಾಡಿ, ಮಗಳಿಗೆ ಈ ಮದುವೆ ಇಷ್ಟವಿರಲಿಲ್ಲ ಎಂಬ ಯಾವುದೇ ಸುಳಿವು ನಮಗೆ ಇರಲಿಲ್ಲ. ನಿಶ್ಚಿತಾರ್ಥ ನಡೆದ ದಿನದಿಂದಲೂ ಆಕೆ ಕೇವಲ ಕೇತನ್ ಜೊತೆಗಷ್ಟೇ ಮಾತನಾಡುತ್ತಿದ್ದಳು. ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಮುಂಬರುವ ನವೆಂಬರ್ ತಿಂಗಳಲ್ಲಿ ಮದುವೆ ಮಾಡಲು ನಾವೆಲ್ಲರೂ ಸಾಕಷ್ಟು ನಿರೀಕ್ಷೆ ಮತ್ತು ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ ಈ ಮಧ್ಯೆ ಚೇತನ್ ಚೌಧರಿ ಎಂಬ ಪ್ರೇಮಿ ಎಲ್ಲಿಂದ ಬಂದ, ಆತ ಯಾರು ಎಂಬುದು ನಮಗೆ ತಿಳಿದಿಲ್ಲ. ಆತನ ಮುಖವನ್ನು ನಾವು ಎಂದಿಗೂ ನೋಡಿಲ್ಲ ಮತ್ತು ಆತ ನಮ್ಮ ಮನೆಗೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮದುವೆ ಬೇಡವೆಂದಿದ್ದಕ್ಕೆ ಬೆದರಿಕೆ ಹಾಕಿದ್ದನೇ ಕೇತನ್?
ಇದೇ ವೇಳೆ ಪೊಲೀಸರ ಜಂಟಿ ವಿಚಾರಣೆಯ ಸಂದರ್ಭದಲ್ಲಿ ಸಿಯಾ ನೀಡಿರುವ ಹೇಳಿಕೆಯು ತನಿಖೆಗೆ ಹೊಸ ತಿರುವು ನೀಡಿದೆ. ತನಗೆ ಮದುವೆ ಇಷ್ಟವಿಲ್ಲದ ಕಾರಣ ಮದುವೆ ನಿಲ್ಲಿಸುವಂತೆ ಕೇತನ್ ಬಳಿ ಕೇಳಿಕೊಂಡಿದ್ದಾಗಿ ಆಕೆ ಹೇಳಿದ್ದಾಳೆ. ಆದರೆ, ಕೇತನ್ ತನ್ನ ಕುಟುಂಬವು ಪ್ರಭಾವಶಾಲಿ ಮತ್ತು ಶ್ರೀಮಂತವಾಗಿದೆ, ನೀನು ಎಷ್ಟೇ ಪ್ರಯತ್ನಿಸಿದರೂ ಈ ಮದುವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ಸಿಯಾ ಪೊಲೀಸರ ಮುಂದೆ ಆರೋಪಿಸಿದ್ದಾಳೆ. ಆದರೆ ಪೊಲೀಸರು ಈ ಹೇಳಿಕೆಯನ್ನು ನ್ಯಾಯಾಲಯದ ಪರಿಶೀಲನೆಗೆ ಒಪ್ಪಿಸಿದ್ದಾರೆ.
ಕೊಲೆಗೆ ನಡೆದಿದ್ದವು ಹಲವು ಯತ್ನಗಳು!
ತನಿಖೆಯ ಪ್ರಕಾರ, ಸಿಯಾ ಕೇತನ್‌ನನ್ನು ಕೊಲ್ಲಲು ಮೊದಲಿನಿಂದಲೂ ಲೋಹಗಢ ಕೋಟೆಗೆ ಕರೆದೊಯ್ಯಲು ಹಲವು ಬಾರಿ ಪ್ರಯತ್ನಿಸಿದ್ದಳು. ಮೊದಲ ಪ್ರಯತ್ನದಲ್ಲಿ ಕೇತನ್ ಬಂಡೆಯ ಪೊದೆಯನ್ನು ಹಿಡಿದು ಬದುಕುಳಿದಾಗ, ಹಾವು ಬಂದಿದ್ದರಿಂದ ಭಯಗೊಂಡು ತಳ್ಳಿದ್ದಾಗಿ ಸಿಯಾ ಸುಳ್ಳು ಹೇಳಿ ನಂಬಿಸಿದ್ದಳು. ಅಂತಿಮವಾಗಿ ಜೂನ್ 18 ರಂದು ಪ್ರೇಮಿ ಚೇತನ್ ಜೊತೆಗೂಡಿ ಆತನನ್ನು ಪ್ರಪಾತಕ್ಕೆ ತಳ್ಳಿ ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದಳು. ಬೇಕರಿಯೊಂದರ ಮಾಲೀಕಳಾಗಿದ್ದ 19 ವರ್ಷದ ಸಿಯಾ ಹಾಗೂ ಡ್ರೈ ಫ್ರೂಟ್ಸ್ ವ್ಯಾಪಾರಿಯಾಗಿದ್ದ ಚೇತನ್ ಇಬ್ಬರೂ ಈಗ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಪುಣೆ ಕೋಟೆ ಕೊಲೆ ಕೇಸ್ : ‘ಮದುವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದನೇ ಕೇತನ್?



















