ತುಮಕೂರು : ಜಿಲ್ಲೆಯಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದ್ದು, ಮುಗ್ದ ಕಾರ್ಮಿಕರಿಂದ ಬರಿಗೈಲಿ ಮಲ ಬಾಚಿಸಿದ ಘಟನೆ ಇಲ್ಲಿನ ಕೆಇಬಿ ಎಂಜಿನಿಯರ್ಸ್ ಸಂಘದ ಆವರಣದಲ್ಲಿ ನಡೆದಿದೆ.
ತುಮಕೂರು ನಗರದ ಸಮೀಪದಲ್ಲಿಯೇ ಇರುವ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ಕಟ್ಟಡದ ನವೀಕರಣದ ವೇಳೆ ಮಲದ ಗುಂಡಿಯನ್ನ ದಲಿತ ಸಮುದಾಯಕ್ಕೆ ಸೇರಿದ ನಾಲ್ವರು ಕಾರ್ಮಿಕರು ಬರಿಗೈಯಲ್ಲಿಯೇ ಸ್ವಚ್ಚಗೊಳಿಸಿ, ಬರಿ ಮೈನಲ್ಲಿಯೇ ಹೊತ್ತು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೆಇಬಿ ಎಂಜಿನಿಯರ್ ಒಬ್ಬರು ನಮಗೆ ಈ ಕೆಲಸ ಮಾಡುವಂತೆ ನಿಯೋಜಿಸಿದ್ದಾರೆ ಎಂದು ಸ್ವಚ್ಛತೆಗೆ ಇಳಿದಿದ್ದ ಕೆಲಸಗಾರರು ತಿಳಿಸಿದ್ದಾರೆ. ಎಂಜಿನಿಯರ್ ಒಬ್ಬರು ಕೆಲಸಕ್ಕೆ ಹೇಳಿದ್ದರು. ಮೂರು ದಿನದಿಂದ ಕೆಲಸ ಮಾಡುತ್ತಿದ್ದೇವೆ, ಮೊದಲಿಗೆ ಮಣ್ಣು ತುಂಬಲೆಂದು ಕರೆದುಕೊಂಡು ಬಂದಿದ್ರು. ಇಲ್ಲಿಗೆ ಬಂದು ನೋಡಿದಾಗ, ಶೌಚಗುಂಡಿ ಎಂದು ತಿಳಿಯಿತು. ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ಮಾಡಬಾರದು ಅಂತಾ ನಮಗೆ ಗೊತ್ತಿರಲಿಲ್ಲ, ಇನ್ಮುಂದೆ ಇಂತಹ ಕೆಲಸಕ್ಕೆ ಕರೆದರೆ ಹೊಗೊದಿಲ್ಲ ಅಂತ ಕಾರ್ಮಿಕರು ತಮ್ಮ ಆಸಹಾಯಕತೆ ತೋಡಿಕೊಂಡಿದ್ದಾರೆ.
ಇನ್ನೂ ವಿಡಿಯೋ ಆಧರಿಸಿ ವಿಚಾರಣೆ ನಡೆಸಿದ ತುಮಕೂರು ನಗರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುತ್ತಿಗೆದಾರ ಗುರುಪ್ರಸಾದ್ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ.
ಗುರುಪ್ರಸಾದ್ ಕೆಇಬಿ ಇಂಜಿನಿಯರ್ಸ್ ಸಂಘದ ಕಟ್ಟಡದ ನವೀಕರಣ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ ಎನ್ನಲಾಗಿದೆ. ಈ ಕಟ್ಟಡದ ಮಲ ಶುಚಿಗೊಳಿಸಲು ಮೂವರು ಕಾರ್ಮಿಕರನ್ನ ಬಳಕೆ ಮಾಡಿಕೊಂಡಿದ್ದಾನೆ. ಮಲ ಶುಚಿಗೊಳಿಸಲು ಯಾವುದೇ ಕೈಚೀಲಗಳು ಹಾಗೂ ಜೀವ ರಕ್ಷಣೆಯ ಸಲಕರಣೆಗಳನ್ನ ನೀಡದೆ ನಿರ್ಲಕ್ಷ ವಹಿಸಿದ್ದಾನೆ. ಈ ಆರೋಪಗಳ ಮೇಲೆ ಗುರುಪ್ರಸಾದ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ : ಪತ್ರೊಡೆ ಎಲೆ ಕೀಳಲು ಮರ ಏರಿದ ನವವಿವಾಹಿತನಿಗೆ ಕರೆಂಟ್ ಶಾಕ್ – ಸ್ಥಳದಲ್ಲೇ ಸಾವು!



















