ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಇರಾನ್‌ನ ಶಕ್ತಿಶಾಲಿ ಹುದ್ದೆಯಾದ ‘ಪರಮೋಚ್ಚ ನಾಯಕ’ನ (ಸುಪ್ರೀಂ ಲೀಡರ್) ಸ್ಥಾನಕ್ಕೆ ದಿವಂಗತ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಹೊಸೈನಿ ಖಮೇನಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಇರಾನ್‌ನ ಉನ್ನತ ನಿರ್ಧಾರಕ ಮಂಡಳಿಯಾದ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಈ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಫೆ.28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ 36 ವರ್ಷಗಳ ಕಾಲ ಇರಾನ್ ಆಳಿದ್ದ ಆಯತೊಲ್ಲಾ ಖಮೇನಿ ಹತರಾಗಿದ್ದರು. ಇರಾನ್‌ನ ಪರಮಾಣು ಚಟುವಟಿಕೆಗಳ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾದ ಈ ಭೀಕರ ದಾಳಿಯಲ್ಲಿ ಖಮೇನಿ ಅವರ ಪತ್ನಿ ಮಾನ್ಸೌರೆಹ್ ಖೋಜಾಸ್ತೆ, ಪುತ್ರಿ, ಅಳಿಯ ಹಾಗೂ ಮೊಮ್ಮಗಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯಲ್ಲಿ ಒಟ್ಟು 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಖಮೇನಿ ನಿಧನದ ನಂತರ ಇರಾನ್ ನಾಯಕತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಇದೀಗ ಮೊಜ್ತಾಬಾ ಆಯ್ಕೆಯ ಮೂಲಕ ಉತ್ತರ ಸಿಕ್ಕಿದೆ.
ಹಂಗಾಮಿ ಸಮಿತಿಯಿಂದ ಮೊಜ್ತಾಬಾ ಕೈಗೆ ಅಧಿಕಾರ
ಆಯತೊಲ್ಲಾ ಖಮೇನಿ ಅವರು ತಮ್ಮ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ. ಅವರ ನಿಧನದ ನಂತರ ಆಯತೊಲ್ಲಾ ಅಲಿರೆಜಾ ಅರಾಫಿ, ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಂ ಹೊಸೈನ್ ಮೊಹ್ಸೆನಿ ಎಜೆ ಒಳಗೊಂಡ ಮೂವರು ಸದಸ್ಯರ ಹಂಗಾಮಿ ನಾಯಕತ್ವ ಮಂಡಳಿಯು ದೇಶದ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಇದೀಗ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಮೊಜ್ತಾಬಾ ಅವರನ್ನು ನೂತನ ಪರಮೋಚ್ಚ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ದೇಶದ ನಾಯಕತ್ವದ ಗೊಂದಲಕ್ಕೆ ತೆರೆ ಎಳೆದಿದೆ.
ಕೆರಳಿದ ಇರಾನ್; ಹೆಚ್ಚಿದ ಯುದ್ಧ ಭೀತಿ
ತನ್ನ ಪರಮೋಚ್ಚ ನಾಯಕನ ಹತ್ಯೆಯಿಂದ ಕೆರಳಿರುವ ಇರಾನ್, ಈಗಾಗಲೇ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ದುಬೈ, ಅಬುಧಾಬಿ, ಕತಾರ್ ಮತ್ತು ಬಹ್ರೇನ್‌ನತ್ತ ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ದುಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಚರ್ಚೆಯ ಸಮಯ ಮುಗಿದಿದೆ” ಎಂದು ಎಚ್ಚರಿಕೆ ನೀಡಿದ್ದು, ಇಸ್ರೇಲ್ ಪಡೆಗಳು ಲೆಬನಾನ್‌ನೊಳಗೆ ನುಗ್ಗಿ ಹೆಜ್ಬೊಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.
ಮೃತ ಆಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯು ಪವಿತ್ರ ನಗರವಾದ ಮಶಾದ್‌ನಲ್ಲಿ ನಡೆಯಲಿದ್ದು, ಟೆಹ್ರಾನ್‌ನಲ್ಲಿ ಬೃಹತ್ ವಿದಾಯ ಸಮಾರಂಭವನ್ನು ಏರ್ಪಡಿಸಲು ರೆವಲ್ಯೂಷನರಿ ಗಾರ್ಡ್ಸ್ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ : ಇರಾನ್‌ನಲ್ಲಿ ಚಿಕ್ಕಮಗಳೂರಿನ ಯುವಕ ನಾಪತ್ತೆ.. ಪೋಷಕರು ಕಂಗಾಲು!



















