ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ಪ್ರದೀಪ್ ರಾವತ್ ನಿಧನರಾಗಿದ್ದಾರೆ. ‘ಘಜನಿ’, ‘ಲಗಾನ್’ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ಖಡಕ್ ಖಳನಾಯಕನಾಗಿ ಮಿಂಚಿದ್ದ ಅವರು, ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ 74ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಪ್ರದೀಪ್ ರಾವತ್ ತಮ್ಮ ಗಂಭೀರ ಧ್ವನಿ, ವಿಭಿನ್ನ ದೇಹಭಾಷೆ ಮತ್ತು ಪ್ರಭಾವಿ ಅಭಿನಯದ ಮೂಲಕ ಭಾರತೀಯ ಸಿನಿರಂಗದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದರು. ವಿಶೇಷವಾಗಿ ‘ಘಜನಿ’ ಚಿತ್ರದಲ್ಲಿನ ಅವರ ಖಳನಾಯಕನ ಪಾತ್ರ ಮತ್ತು ‘ಲಗಾನ್’ ಚಿತ್ರದ ಅಭಿನಯ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ನಟ ಅಮೀರ್ ಖಾನ್ ಅವರೊಂದಿಗೆ ಹಲವು ವರ್ಷಗಳ ಸ್ನೇಹವನ್ನೂ ಹೊಂದಿದ್ದರು.
ಪ್ರದೀಪ್ ರಾವತ್ ಅವರು ಚಿತ್ರರಂಗಕ್ಕೆ ಬರುವ ಮುನ್ನವೇ ಬಿ.ಆರ್. ಚೋಪ್ರಾ ಅವರ ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರ ನಿರ್ವಹಿಸಿ ಮನೆಮಾತಾಗಿದ್ದರು. ನಂತರ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನೂರಾರು ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು.
ಕನ್ನಡ ಚಿತ್ರರಂಗದಲ್ಲೂ ಪ್ರದೀಪ್ ರಾವತ್ ತಮ್ಮದೇ ಆದ ಗುರುತು ಮೂಡಿಸಿದ್ದರು. ನಟ ದರ್ಶನ್, ಉಪೇಂದ್ರ ಹಾಗೂ ಸುದೀಪ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ಮನಗೆದ್ದಿದ್ದರು.
ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದ ಅವರು, ಕೆಲ ವಾರಗಳ ಹಿಂದೆ ಮತ್ತೆ ಅನಾರೋಗ್ಯಕ್ಕೊಳಗಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆರೋಗ್ಯ ಸ್ಥಿತಿ ಹದಗೆಟ್ಟು ಸೋಮವಾರ ಸಂಜೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್, ದಕ್ಷಿಣ ಭಾರತೀಯ ಚಿತ್ರರಂಗದ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ‘ಬಾಸ್’ಗೆ ‘ದಾಸ’ನ ಗ್ರೀನ್ ಸಿಗ್ನಲ್..?


















