ನವದೆಹಲಿ : ಭಾರತೀಯ ಸೇನೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಬ್ರಿಗೇಡಿಯರ್ ದೀಪ್ ಭಗತ್ ಅವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಗೆ ಭೇಟಿ ನೀಡಿದ್ದು, ಅಲ್ಲಿನ ಬದಲಾದ ಪರಿಸ್ಥಿತಿಯ ಕುರಿತು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ಕಾಲದಲ್ಲಿ ಸಂಘರ್ಷ ಪೀಡಿತ ಪ್ರದೇಶವಾಗಿದ್ದ ಶೋಪಿಯಾನ್‌ನಲ್ಲಿ ಇಂದು ಶಾಂತಿ ನೆಲೆಸಿರುವುದನ್ನು ಕಂಡು ಅವರು ಆಶ್ಚರ್ಯ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋ ಹಂಚಿಕೊಂಡಿರುವ ಬ್ರಿಗೇಡಿಯರ್ ಭಗತ್, “ನಾನು ಇಂದು ಶೋಪಿಯಾನ್ ಪ್ರವೇಶಿಸುತ್ತಿದ್ದೇನೆ. ನನ್ನ ಜೀವಿತಾವಧಿಯಲ್ಲಿ ಯಾವುದೇ ಶಸ್ತ್ರಾಸ್ತ್ರ ಅಥವಾ ರಕ್ಷಣೆ ಇಲ್ಲದೆ ಇಲ್ಲಿಗೆ ಮತ್ತೆ ಮರಳುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ” ಎಂದು ಭಾವುಕರಾಗಿ ಹೇಳಿದ್ದಾರೆ. 90ರ ದಶಕದಲ್ಲಿ ಮತ್ತು 2000ರ ಆರಂಭದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡಿದ ಸೈನಿಕರು, ಈ ಪ್ರದೇಶವು ಇಷ್ಟು ಬೇಗ ಶಾಂತಿಯುತವಾಗುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಅವರು ಸ್ಮರಿಸಿದ್ದಾರೆ.
ಬದಲಾದ ಕಾಶ್ಮೀರದ ಚಿತ್ರಣ
ಎರಡು ದಶಕಗಳ ಹಿಂದೆ ಒಬ್ಬ ಸೈನಿಕನಾಗಿ ಪೂರ್ಣ ಪ್ರಮಾಣದ ಸಮರ ಉಡುಪು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಇಲ್ಲಿ ಗಸ್ತು ತಿರುಗುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಆದರೆ ಇಂದು ಒಬ್ಬ ಪ್ರವಾಸಿಗನಾಗಿ ನನ್ನ ಬೈಕ್‌ನಲ್ಲಿ ಯಾವುದೇ ಭೀತಿ ಇಲ್ಲದೆ ಸಂಚರಿಸುತ್ತಿರುವುದು ನನಗೆ ಹೊಸ ಅನುಭವ ನೀಡಿದೆ. “ತೆರೆದ ರಸ್ತೆಗಳು ಮತ್ತು ತೆರೆದ ಮನಸ್ಸುಗಳು ಇಂದು ನನ್ನನ್ನು ಸ್ವಾಗತಿಸುತ್ತಿವೆ. ಇದು ಬದಲಾವಣೆಯ ಸಂಕೇತ ಮತ್ತು ಭರವಸೆಯ ಭಾವನೆ” ಎಂದು ಅವರು ವಿಡಿಯೋದ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ನೆಟ್ಟಿಗರ ಶ್ಲಾಘನೆ
ಈ ವಿಡಿಯೋ ಸುಮಾರು 4.4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ನಿವೃತ್ತ ಅಧಿಕಾರಿಗೆ ಗೌರವ ಸಲ್ಲಿಸಿದ್ದಾರೆ. ಸೇನಾ ಪಡೆಗಳ ತ್ಯಾಗದಿಂದಲೇ ಇಂದು ಕಾಶ್ಮೀರದಲ್ಲಿ ಇಂತಹ ಸುದಿನಗಳು ಬಂದಿವೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. “ಭಾರತೀಯ ಸೇನೆಗೆ ನಾವು ಸದಾ ಋಣಿಯಾಗಿದ್ದೇವೆ. ನಿಮ್ಮ ಸೇವೆಯಿಂದಾಗಿ ಇಂದು ನಾವು ಶಾಂತಿಯಿಂದ ಇರಲು ಸಾಧ್ಯವಾಗಿದೆ” ಎಂದು ಹಲವರು ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನೂ ಕೆಲವು ಪ್ರವಾಸಿಗರು ತಾವು ಕೂಡ ಇತ್ತೀಚೆಗೆ ಕಾಶ್ಮೀರದ ಅತೀ ಸುರಕ್ಷಿತ ಮತ್ತು ಸುಂದರ ತಾಣಗಳಿಗೆ ಭೇಟಿ ನೀಡಿದ್ದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಮಂಗಳೂರಲ್ಲಿ ಭೀಕರ ಅಪಘಾತ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!



















