ಭುವನೇಶ್ವರ್/ಸಂಬಲ್‌ಪುರ: ಬಾಂಗ್ಲಾದೇಶದ ನುಸುಳುಕೋರ ಎಂದು ಶಂಕಿಸಿ, ಆಧಾರ್ ಕಾರ್ಡ್ ತೋರಿಸುವಂತೆ ಸೂಚಿಸಿ, ದುಷ್ಕರ್ಮಿಗಳ ಗುಂಪೊಂದು ಪಶ್ಚಿಮ ಬಂಗಾಳ ಮೂಲದ 19 ವರ್ಷದ ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದ ಜುಯೆಲ್ ಶೇಖ್(19) ಎಂದು ಗುರುತಿಸಲಾಗಿದೆ. ಈ ದಾಳಿಯಲ್ಲಿ ಇತರೆ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 24ರ ಬುಧವಾರ ರಾತ್ರಿ ಶಾಂತಿ ನಗರ ಪ್ರದೇಶದಲ್ಲಿ ಕಾರ್ಮಿಕರು ಅಡುಗೆ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. “ಆರೋಪಿಗಳು ಮೊದಲು ಬಂದು ನಮ್ಮ ಬಳಿ ಬೀಡಿ ಕೇಳಿದರು. ನಂತರ ನೀವು ಬಾಂಗ್ಲಾದೇಶದವರಾ ಎಂದು ಪ್ರಶ್ನಿಸಿ, ಕೂಡಲೇ ಆಧಾರ್ ಕಾರ್ಡ್ ತೋರಿಸುವಂತೆ ಒತ್ತಾಯಿಸಿದರು. ಆ ಬಳಿಕ ನಮ್ಮನ್ನು ಥಳಿಸಿ, ಜುಯೆಲ್ ಶೇಖ್ ಅವರ ತಲೆಗೆ ಕಬ್ಬಿಣದ ರಾಡ್‌ನಂಥ ವಸ್ತುವಿನಿಂದ ಬಲವಾಗಿ ಹೊಡೆದರು,” ಎಂದು ಗಾಯಾಳು ಕಾರ್ಮಿಕ ಮಜರ್ ಖಾನ್ ಆರೋಪಿಸಿದ್ದಾರೆ.
ಪೊಲೀಸರ ಸ್ಪಷ್ಟನೆ:
ಆದರೆ, ಸಂತ್ರಸ್ತರ ಆರೋಪವನ್ನು ಪೊಲೀಸರು ಭಾಗಶಃ ತಳ್ಳಿಹಾಕಿದ್ದಾರೆ. “ಇದು ಬೀಡಿ ವಿಚಾರವಾಗಿ ನಡೆದ ಜಗಳವೇ ಹೊರತು, ಸಂತ್ರಸ್ತರ ಗುರುತು ಅಥವಾ ರಾಷ್ಟ್ರೀಯತೆಗೆ ಸಂಬಂಧಿಸಿದ ವಿಷಯವಲ್ಲ. ಮೃತರು ಬಂಗಾಳಿಯೋ ಅಥವಾ ಬಾಂಗ್ಲಾದೇಶಿಯೋ ಎನ್ನುವುದಕ್ಕೂ ಈ ಕೊಲೆಗೂ ಸಂಬಂಧವಿಲ್ಲ,” ಎಂದು ಐಜಿಪಿ (ಉತ್ತರ ವಲಯ) ಹಿಮಾಂಶು ಕುಮಾರ್ ಲಾಲ್ ತಿಳಿಸಿದ್ದಾರೆ. ಮೃತರು ಮತ್ತು ಆರೋಪಿಗಳು ಪರಸ್ಪರ ಪರಿಚಯಸ್ಥರಾಗಿದ್ದರು ಎಂದೂ ಪೊಲೀಸರು ಹೇಳಿದ್ದಾರೆ.
ರಾಜಕೀಯ ಸಂಘರ್ಷ:
ಈ ಘಟನೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿಜೆಪಿ ವಿರುದ್ಧ ಕಿಡಿಕಾರಿದೆ. “ಬಿಜೆಪಿಯು ಬಂಗಾಳಿ ಭಾಷಿಕರ ವಿರುದ್ಧ ನಡೆಸುತ್ತಿರುವ ನಿರಂತರ ದ್ವೇಷದ ಅಭಿಯಾನವೇ ಈ ಹತ್ಯೆಗೆ ನೇರ ಕಾರಣ. ಬಂಗಾಳಿಗಳನ್ನು ನುಸುಳುಕೋರರೆಂದು ಬಿಂಬಿಸುತ್ತಿರುವುದರಿಂದ ಜನಸಾಮಾನ್ಯರೇ ವಲಸೆ ಅಧಿಕಾರಿಗಳಂತೆ ವರ್ತಿಸಿ ಅಮಾಯಕರ ಪ್ರಾಣ ತೆಗೆಯುತ್ತಿದ್ದಾರೆ,” ಎಂದು ಟಿಎಂಸಿ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಸಾಕು ನಾಯಿಯ ಅನಾರೋಗ್ಯದಿಂದ ನೊಂದು ಅಕ್ಕ-ತಂಗಿ ಆತ್ಮಹತ್ಯೆ!



















