ಭೋಪಾಲ್ : ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರ ಬೇಜವಾಬ್ದಾರಿತನ ಹಾಗೂ ಘೋರ ನಿರ್ಲಕ್ಷ್ಯಕ್ಕೆ 19 ತಿಂಗಳ ಮಗುವೊಂದು ತನ್ನ ದೃಷ್ಟಿಯನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗುವಿಗೆ ನೆಗಡಿಯ ಜೊತೆಗೆ, ಕಣ್ಣು ಕೆಂಪಾಗಿದ್ದಕ್ಕೆಂದು ಹೆತ್ತವರು ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಮೂಗಿಗೆ ಹಾಕಬೇಕಾಗಿದ್ದ ‘ಸಲೈನ್ ನಾಸಲ್ ಡ್ರಾಪ್ಸ್’ ಅನ್ನು ಮಗುವಿನ ಕಣ್ಣಿಗೆ ಹಾಕಿದ್ದು, ಪರಿಣಾಮ ಮಗು ದೃಷ್ಟಿಯನ್ನೇ ಕಳೆದುಕೊಂಡಿತು ಎಂದು ಪೋಷಕರು ಆರೋಪಿಸಿದ್ದಾರೆ.
ಮಗುವಿನ ಸ್ಥಿತಿ ಬಿಗಡಾಯಿಸಿದ್ದು ಹೇಗೆ?
ಸಾಗರ್ ಜಿಲ್ಲೆಯ ಬಂದಾ ಪಟ್ಟಣದ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮೃತ ಶಿಶುವಿನ ತಂದೆ ಇಂದ್ರರಾಜ್ ವಿಶ್ವಕರ್ಮ ಅವರು ಮೇ 29 ರಂದು ತಮ್ಮ ಪುತ್ರ ವಿನಯ್ ವಿಶ್ವಕರ್ಮನಿಗೆ ನೆಗಡಿ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ಸ್ಥಳೀಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷಿಸಿ ಕಣ್ಣಿಗೆ ನಾಸಲ್ ಡ್ರಾಪ್ಸ್ ಹಾಕಿದ್ದಲ್ಲದೆ, ಪ್ಯಾರಸಿಟಮಾಲ್ ಸಿರಪ್, ಇಂಜೆಕ್ಷನ್ ಸೇರಿದಂತೆ ಇತರೆ ಔಷಧಿಗಳನ್ನು ನೀಡಿದ್ದರು. ಆದರೆ ಚಿಕಿತ್ಸೆ ಪಡೆದ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿತು. ಹಲವು ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಕಾದರೂ ಯಾವುದೇ ಸುಧಾರಣೆ ಕಾಣದಿದ್ದಾಗ, ವೈದ್ಯರು ಮಗುವನ್ನು ಸಾಗರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್‌ನ ಏಮ್ಸ್ (AIIMS) ಆಸ್ಪತ್ರೆಗೆ ರವಾನಿಸಲಾಯಿತು.
ಶಾಶ್ವತವಾಗಿ ದೃಷ್ಟಿ ಕಳೆದುಕೊಂಡ ಕಂದಮ್ಮ
ಭೋಪಾಲ್ ಏಮ್ಸ್ ಆಸ್ಪತ್ರೆಯ ವೈದ್ಯರು ಮಗುವನ್ನು ತೀವ್ರ ತಪಾಸಣೆಗೆ ಒಳಪಡಿಸಿದ ನಂತರ ಹೆತ್ತವರಿಗೆ ಬರಸಿಡಿಲು ಬಡಿಯುವಂಥ ಸುದ್ದಿ ನೀಡಿದರು. ಮಗು ತನ್ನ ಕಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿದೆ ಎಂದು ಏಮ್ಸ್ ವೈದ್ಯರು ತಿಳಿಸಿದರು. ದೋಷಪೂರಿತ ಚಿಕಿತ್ಸೆ ಅಥವಾ ಆರಂಭದಲ್ಲಿ ನಡೆದ ವೈದ್ಯಕೀಯ ನಿರ್ಲಕ್ಷ್ಯವೇ ಮಗು ಕಣ್ಣು ಕಳೆದುಕೊಳ್ಳಲು ನೇರ ಕಾರಣ ಎಂದು ವೈದ್ಯರು ತಮಗೆ ತಿಳಿಸಿದ್ದಾಗಿ ತಂದೆ ಇಂದ್ರರಾಜ್ ಅಳಲು ತೋಡಿಕೊಂಡಿದ್ದಾರೆ. ಈ ಆಘಾತಕಾರಿ ಘಟನೆಯ ನಂತರ ಇಂದ್ರರಾಜ್ ಬಂದಾ ಪೊಲೀಸ್ ಠಾಣೆಗೆ ಧಾವಿಸಿ, ತಮಗೆ ವೈದ್ಯರ ಹೆಸರು ತಿಳಿಯದಿದ್ದರೂ ನೋಡಿದರೆ ಗುರುತಿಸಬಲ್ಲೆ ಎಂದು ಹೇಳಿ, ತಪ್ಪಿತಸ್ಥ ವೈದ್ಯ ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆದೇಶ
ಬಡ ಕುಟುಂಬದ ಆಕ್ರೋಶ ಮತ್ತು ದೂರಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವೈದ್ಯಕೀಯ ಇಲಾಖೆ ಅಧಿಕೃತ ತನಿಖೆಗೆ ಆದೇಶಿಸಿದೆ. ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಅವರು ಈ ಇಡೀ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ಸಮಿತಿಯೊಂದನ್ನು ರಚಿಸಿದ್ದಾರೆ ಎಂದು ಬ್ಲಾಕ್ ವೈದ್ಯಕೀಯ ಅಧಿಕಾರಿ ಯೋಗೇಂದ್ರ ಖಾತಿಕ್ ತಿಳಿಸಿದ್ದಾರೆ. ಸಮಿತಿಯ ವರದಿ ಬಂದ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಸದ್ಯಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಮಗುವಿನ ಪೋಷಕರು ತಮಗೆ ನ್ಯಾಯ ಸಿಗಬೇಕು ಮತ್ತು ಮಗುವಿನ ಜೀವನದ ಜೊತೆ ಆಟವಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಮಮಂದಿರ ಕೇಸ್‌ಗೆ ಟ್ವಿಸ್ಟ್ : FIRಗೂ ಮುನ್ನವೇ 58 ಲಕ್ಷ ರೂ. ವಶಪಡಿಸಿಕೊಂಡಿದ್ದ ಟ್ರಸ್ಟ್.. ಮುಚ್ಚಿಹಾಕುವ ಯತ್ನ ನಡೆದಿತ್ತೇ?


















