ಅಯೋಧ್ಯೆ : ಅಯೋಧ್ಯೆಯ ಶ್ರೀ ರಾಮ ಮಂದಿರದ ಕಾಣಿಕೆ ಹಣ ಲೂಟಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಹೊರಬಿದ್ದಿರುವ ಮಾಹಿತಿ ಇಡೀ ಪ್ರಕರಣದ ಸುತ್ತ ಮತ್ತಷ್ಟು ಅನುಮಾನವನ್ನು ಮೂಡಿಸಿದೆ.
ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳ (SIT) ಅಧಿಕೃತವಾಗಿ ತನಿಖೆ ಆರಂಭಿಸುವ ಹಾಗೂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುವ ಹಲವು ದಿನಗಳ ಮುಂಚೆಯೇ, ಕಳ್ಳತನವಾಗಿದ್ದ ಹಣದ ಪೈಕಿ ಬರೋಬ್ಬರಿ 58 ಲಕ್ಷ ರೂ.ಯನ್ನು ಟ್ರಸ್ಟ್‌ನ ಪ್ರಮುಖರೇ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಈ ರಹಸ್ಯ ಕಾರ್ಯಾಚರಣೆಯು ಕಳ್ಳತನದ ಜಾಲದಲ್ಲಿ ಟ್ರಸ್ಟ್‌ನ ಒಳಗಿನವರೇ ಶಾಮೀಲಾಗಿರುವುದನ್ನು ಸ್ಪಷ್ಟಪಡಿಸಿದ್ದು, ವಿಷಯವನ್ನು ಸದ್ದಿಲ್ಲದೆ ಮುಚ್ಚಿಹಾಕಲು ಪ್ರಯತ್ನ ನಡೆದಿತ್ತೇ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಜೂನ್ 4ರಂದೇ ಕಾಣಿಕೆ ಹಣ ಕಳ್ಳತನವಾಗುತ್ತಿರುವ ಮಾಹಿತಿ ಟ್ರಸ್ಟ್‌ನ ಉನ್ನತಾಧಿಕಾರಿಗಳಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆದೇಶದ ಮೇರೆಗೆ ಜೂನ್ 5 ರಂದು ಟ್ರಸ್ಟ್ ಪ್ರತಿನಿಧಿಗಳು ಮತ್ತು ಕೆಲವು ಪೊಲೀಸರು ಆರೋಪಿ ಅವಿನಾಶ್ ಶುಕ್ಲಾ ನಿವಾಸದ ಮೇಲೆ ದಾಳಿ ನಡೆಸಿ 58 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದರು. ಇದಕ್ಕೆ ಪೂರಕವೆಂಬಂತೆ, ಆರೋಪಿ ಅವಿನಾಶ್ ಶುಕ್ಲಾನನ್ನು ಕಪ್ಪು ಬ್ಯಾಗ್ ಸಮೇತ ಪೊಲೀಸರು ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಈಗ ಲಭ್ಯವಾಗಿವೆ. ಇದಾದ ನಂತರ ಜೂನ್ 5ರಿಂದ ಜೂನ್ 8ರ ಅವಧಿಯಲ್ಲಿ ಉಳಿದ ಹಣವನ್ನು ಆರೋಪಿಗಳು ಬ್ಯಾಂಕ್ ವರ್ಗಾವಣೆ (ಆನ್‌ಲೈನ್ ಟ್ರಾನ್ಸ್‌ಫರ್) ಮೂಲಕ ಟ್ರಸ್ಟ್ ಖಾತೆಗೆ ಮರುಪಾವತಿಸಿದ್ದರು. ಆದರೆ ಈ ಇಡೀ ಪ್ರಕ್ರಿಯೆ ಮುಗಿದ ನಂತರ, ಅಂದರೆ ಜೂನ್ 7ರಂದು ಈ ಹಗರಣ ಸಾರ್ವಜನಿಕವಾಗಿ ಬಯಲಾಯಿತು.
ಎಸ್ಐಟಿ ತನಿಖೆ, ರಾಜೀನಾಮೆ ಪರ್ವ
ವಿವಾದ ತೀವ್ರಗೊಂಡಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಟ್ರಸ್ಟ್‌ನ ಮನವಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಜೂನ್ 13 ರಂದು ವಿಶೇಷ ತನಿಖಾ ದಳವನ್ನು (SIT) ರಚಿಸಿತು. ಎಸ್ಐಟಿ ತನಿಖೆ ಮೇರೆಗೆ ಅವಿನಾಶ್ ಶುಕ್ಲಾ ಸೇರಿದಂತೆ 8 ಸಿಬ್ಬಂದಿಯನ್ನು ಬಂಧಿಸಲಾಯಿತು. ಇದೇ ಅವಧಿಯಲ್ಲಿ ನೈತಿಕ ಹೊಣೆ ಹೊತ್ತು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಾಯಿತು. ನಗದು ನಿರ್ವಹಣೆ, ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿನ ಲೋಪಗಳು ಮತ್ತು ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯ ವೈಫಲ್ಯವನ್ನು ಎಸ್ಐಟಿ ತನ್ನ ತನಿಖಾ ವರದಿಯಲ್ಲಿ ಎತ್ತಿ ತೋರಿಸಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ತನಿಖಾ ಏಜೆನ್ಸಿಗಳ ಮುಂದಿರುವ ಸವಾಲು
ರಾಮ ಮಂದಿರದ ಕಾಣಿಕೆ ಹಣದಲ್ಲೇ ವಂಚನೆ ನಡೆದಿರುವುದು ಈಗ ತೀವ್ರ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಸರ್ಕಾರದ ಕಠಿಣ ನಿಗಾ ಇದ್ದಾಗಲೂ ಇಷ್ಟೊಂದು ದೊಡ್ಡ ಮಟ್ಟದ ಕಳ್ಳತನ ಟ್ರಸ್ಟ್ ಕಣ್ಣು ತಪ್ಪಿಸಿ ನಡೆದಿದ್ದು ಹೇಗೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ವಿಶ್ವ ಹಿಂದೂ ಪರಿಷತ್ (VHP) ಕೂಡ ಪಾರದರ್ಶಕ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದೆ. ಸದ್ಯ ತನಿಖಾ ಸಂಸ್ಥೆಗಳು ಅಧಿಕೃತ ದೂರು ದಾಖಲಾಗುವ ಮುನ್ನವೇ ಹಣ ವಸೂಲಿ ಪ್ರಕ್ರಿಯೆ ಆರಂಭಿಸಿದ್ದರ ಕಾನೂನುಬದ್ಧತೆ ಮತ್ತು ಅದರಲ್ಲಿ ಪಾಲಿಸಲಾದ ನಿಯಮಗಳ ಬಗ್ಗೆ ತನಿಖೆಯನ್ನು ಕೇಂದ್ರೀಕರಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯಿದೆ.
ಇದನ್ನೂ ಓದಿ : ಉಡುಪಿ : ಆಸ್ತಿಗಾಗಿ ಹೆತ್ತ ತಂದೆ ತಾಯಿಯನ್ನೇ ಮನೆಯಿಂದ ಹೊರದಬ್ಬಿದ ಮಗ



















