ರಾಯಚೂರು : ನಗರದ ಖಾಸಗಿ ಆಸ್ಪತ್ರೆಯಲ್ಲಿ ಯುವತಿಯನ್ನು ಚುಡಾಯಿಸಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮೆಹಬೂಬ್ ಎಂಬ ಯುವಕನನ್ನು ಯುವತಿಯ ಮನೆಯವರು ಮನೆಗೆ ಕರೆದೊಯ್ದು ಕೋಣೆಯಲ್ಲಿ ಕೂಡಿ ಹಾಕಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ತಂಗಿಯನ್ನು ಚುಡಾಯಿಸಿದ್ದಾನೆ ಎಂಬ ಆರೋಪದಲ್ಲಿ ಯುವತಿಯ ಅಕ್ಕ ಸೇರಿ ಕುಟುಂಬಸ್ಥರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ತಪ್ಪಾಯಿತು ಎಂದು ಯುವಕ ಕಾಲು ಹಿಡಿದು ಬೇಡಿಕೊಂಡರೂ ಸಹ ಬಿಡದೆ ಹಲ್ಲೆ ಮುಂದುವರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
“ನೀನು ಹಾಸ್ಪಿಟಲ್‌ನಲ್ಲಿ ಏನ್ ಮಾಡ್ತಿದ್ದೆ ಅನ್ನೋದನ್ನ ನಾನು ನೋಡ್ತಾನೇ ಇದ್ದೆ, ಪೂರಾ ಹಾಸ್ಪಿಟಲ್ ನನ್ನ ನಜರ್‌ನಲ್ಲಿತ್ತು” ಎಂದು ಬೆದರಿಕೆ ಹಾಕುತ್ತಾ ಹಲ್ಲೆ ನಡೆಸಿರುವುದು ತಿಳಿದುಬಂದಿದೆ.
ಈ ಘಟನೆ ರಾಯಚೂರು ನಗರದ ಐಡಿಎಸ್ಂಟಿ ಲೇಔಟ್‌ನಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಹಿರಣ್ಯಕೇಶಿ ನದಿಯಲ್ಲಿ ಮುಳುಗಿ ತಾಯಿ-ಮಗ ದುರ್ಮರಣ!



















