ಬೆಂಗಳೂರು : ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣಿನ ತಡೆಗೋಡೆ ಕುಸಿದು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಬೆಂಗಳೂರಿನ ಡಾ. ರಾಜ್‌ಕುಮಾರ್ ಪುಣ್ಯಭೂಮಿ ಬಳಿ ನಡೆದಿದೆ.
ಬಿಡಿಎ ವತಿಯಿಂದ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣು ತೋಡಲಾಗಿತ್ತು. ಇಂದು ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ಅವಘಡ ಸಂಭವಿಸಿದೆ.
ಮಣ್ಣು ಕುಸಿದ ಪರಿಣಾಮ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ನರಳಾಡಿದ್ದಾರೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ ಇಬ್ಬರು ಕಾರ್ಮಿಕರನ್ನು ಮಣ್ಣಿನಿಂದ ಹೊರತೆಗೆದಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಅವಘಡದಲ್ಲಿ ಸಿಲುಕಿದ್ದ ಮೂವರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬ ಕಾರ್ಮಿಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಣ್ಣು ಕುಸಿತಕ್ಕೆ ಕಾರಣವೇನು ಎಂಬ ಬಗ್ಗೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಖಾಸಗಿ ವಲಯಕ್ಕೆ ಇಸ್ರೋದ 950 ಕೋಟಿ ರೂ. ವೆಚ್ಚದ ನೂತನ ಉಪಗ್ರಹ ಉಡಾವಣಾ ಕೇಂದ್ರ ಹಸ್ತಾಂತರ!



















