ಕುರುಕ್ಷೇತ್ರ : ಪೊಲೀಸರನ್ನೇ ಚಕಿತಗೊಳಿಸುವಂಥ ಭೀಕರ ಕೊಲೆ ಪ್ರಕರಣವೊಂದು ಹರ್ಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ, ಆತನ ಹೊಟ್ಟೆಯಿಂದ ಕರುಳನ್ನು ಹೊರತೆಗೆದು ಚೀಲಕ್ಕೆ ತುಂಬುತ್ತಿದ್ದಾಗ ಮನೆ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾಳೆ. ತನ್ನ ಕೃತ್ಯ ಬಯಲಾಯಿತೆಂದು ಹೆದರಿದ ಮಹಿಳೆ ತಕ್ಷಣವೇ ಟೆರೇಸ್‌ನಿಂದ ಕೆಳಗೆ ಜಿಗಿದಿದ್ದು, ಗಂಭೀರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿನಿಮೀಯ ಮಾದರಿಯಲ್ಲಿ ನಡೆದ ಭೀಕರ ಘಟನೆ
ಉತ್ತರ ಪ್ರದೇಶದ ಸೀತಾಪುರ ಮೂಲದ ರಾಜೇಶ್ ಹಾಗೂ ಆತನ ಪತ್ನಿ ವಿಮಲಾ ದೇವಿ ಕುರುಕ್ಷೇತ್ರದ ಪೆಹೋವಾ ರಸ್ತೆಯ ರಾಜ್ ಪ್ಯಾಲೇಸ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ರಾಜೇಶ್ ನೀರು ಸರಬರಾಜು ಮಾಡುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಾಯಂಕಾಲ ಸುಮಾರು 5 ಗಂಟೆಯ ವೇಳೆಗೆ ದಂಪತಿ ನಡುವೆ ಭಾರೀ ಕಲಹ ನಡೆಯುತ್ತಿರುವುದು ಕೇಳಿಬಂದಿತ್ತು. ಜಗಳ, ಗಲಾಟೆ ಮಿತಿಮೀರಿದಾಗ, ಸದ್ದು ಕೇಳಿ ಮನೆ ಮಾಲೀಕ ರಿಂಕು ಟೆರೇಸ್‌ಗೆ ಓಡಿ ಹೋದಾಗ, ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಹಾಗೂ ವಿಮಲಾ ಆತನ ದೇಹದಿಂದ ಹೊರಬಂದಿದ್ದ ಕರುಳನ್ನು ಚೀಲಕ್ಕೆ ತುಂಬುತ್ತಿರುವುದು ಕಂಡುಬಂದಿದೆ. ಮನೆ ಮಾಲೀಕನನ್ನು ನೋಡಿದ ತಕ್ಷಣ ಆತಂಕಗೊಂಡ ಆಕೆ ಟೆರೇಸ್‌ನಿಂದ ಕೆಳಗೆ ಜಿಗಿದಿದ್ದಾಳೆ.
ಪೋಸ್ಟ್‌ಮಾರ್ಟಂ ವರದಿಯಲ್ಲಿ ಆಘಾತಕಾರಿ ಸತ್ಯ ಬಹಿರಂಗ
ಘಟನಾ ಸ್ಥಳಕ್ಕೆ ಧಾವಿಸಿದ ಪೋಲೀಸರು ಹಾಗೂ ವಿಧಿವಿಜ್ಞಾನ (ಫೊರೆನ್ಸಿಕ್) ತಂಡ ಪರಿಶೀಲನೆ ನಡೆಸಿದೆ. ರಾಜೇಶ್ ಹೊಟ್ಟೆಯ ಭಾಗಕ್ಕೆ ಹರಿತವಾದ ಆಯುಧಗಳಿಂದ 35 ಸೆಂಟಿಮೀಟರ್‌ನಷ್ಟು ಆಳವಾದ ಗಾಯ ಮಾಡಲಾಗಿತ್ತು. ಅಲ್ಲದೆ, ಪೋಸ್ಟ್‌ಮಾರ್ಟಂ ವೇಳೆ ರಾಜೇಶ್ ಅವರ ಯಕೃತ್ತು (ಲಿವರ್) ಹಾಗೂ ಬಲ ಮೂತ್ರಪಿಂಡ (ಕಿಡ್ನಿ) ನಾಪತ್ತೆಯಾಗಿರುವುದು ಪತ್ತೆಯಾಗಿದ್ದು, ತನಿಖಾಧಿಕಾರಿಗಳನ್ನು ಇನ್ನಷ್ಟು ಆಘಾತಕ್ಕೀಡುಮಾಡಿದೆ. ಕೃತ್ಯಕ್ಕೆ ಬಳಸಲಾದ ವಿವಿಧ ಅಳತೆಯ ಮೂರು ಚಾಕುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಮಾಟಮಂತ್ರದ ಶಂಕೆ
ಮನೆ ಮಾಲೀಕ ರಿಂಕು ನೀಡಿದ ಮಾಹಿತಿಯಂತೆ, ವಿಮಲಾ ಸಾಂಪ್ರದಾಯಿಕ ಗುಣಪಡಿಸುವಿಕೆ ಮತ್ತು ಮಾಟಮಂತ್ರ/ವಶೀಕರಣಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಳು. ದಂಪತಿಗೆ ವಿವಾಹವಾಗಿ ಹಲವು ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ ಹಾಗೂ ಆಗಾಗ್ಗೆ ಜಗಳವಾಡುತ್ತಿದ್ದರು. ಹತ್ಯೆಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ ಗಾಯಗೊಂಡಿರುವ ಆರೋಪಿ ವಿಮಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಹೇಳಿಕೆ, ಫೊರೆನ್ಸಿಕ್ ಸಾಕ್ಷ್ಯಗಳು ಹಾಗೂ ಪೋಸ್ಟ್‌ಮಾರ್ಟಂ ವರದಿಯ ಆಧಾರದ ಮೇಲೆ ಪೋಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಇಂಗ್ಲೆಂಡ್ ಕೌಂಟಿಯಲ್ಲಿ ‘6-7’ ಟ್ರೆಂಡ್ : ಮೇಧಾವಿ ವಿಧುರಿಯ ವೈರಲ್ ಸಂಭ್ರಮಾಚರಣೆ ಮರುಸೃಷ್ಟಿಸಿದ ಚಹಲ್



















