ನವದೆಹಲಿ : ದೇಶದ ರಾಜಕೀಯ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ‘24 ಅಕ್ಬರ್ ರಸ್ತೆ‘ಯ ಬಂಗಲೆಯನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರವು ಕಾಂಗ್ರೆಸ್ ಪಕ್ಷಕ್ಕೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರದೊಳಗೆ ಈ ಐತಿಹಾಸಿಕ ಕಚೇರಿಯನ್ನು ಹಸ್ತಾಂತರಿಸುವಂತೆ ನೋಟಿಸ್ ನೀಡಲಾಗಿದ್ದು, ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹೊಸ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.

ಕಳೆದ 48 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ಬರ್ ರಸ್ತೆಯ ಈ ಬಂಗಲೆ, ಕೇವಲ ಒಂದು ಕಟ್ಟಡವಲ್ಲ; ಬದಲಿಗೆ ಕಾಂಗ್ರೆಸ್‌ನ ಏಳುಬೀಳುಗಳ ಜೀವಂತ ಸಾಕ್ಷಿಯಾಗಿದೆ. ಕಳೆದ ವರ್ಷವಷ್ಟೇ ಕಾಂಗ್ರೆಸ್ ಪಕ್ಷವು ಕೋಟ್ಲಾ ಮಾರ್ಗದಲ್ಲಿರುವ ತನ್ನ ನೂತನ ಪ್ರಧಾನ ಕಚೇರಿ ‘ಇಂದಿರಾ ಭವನ’ವನ್ನು ಉದ್ಘಾಟಿಸಿತ್ತು. ಆದಾಗ್ಯೂ, ಹಳೆಯ ಕಚೇರಿಯ ಮೇಲಿನ ಭಾವನಾತ್ಮಕ ಸಂಬಂಧ ಹಾಗೂ ಕಾರ್ಯದೊತ್ತಡದ ಕಾರಣದಿಂದಾಗಿ ಅಲ್ಲಿ ಪಕ್ಷದ ಚಟುವಟಿಕೆಗಳು ಇಂದಿಗೂ ಮುಂದುವರಿದಿದೆ. ಇದಷ್ಟೇ ಅಲ್ಲದೆ, 5ನೇ ರೈಸಿನಾ ರಸ್ತೆಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್ ಕಚೇರಿಯನ್ನೂ ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಬ್ರಿಟಿಷ್ ಆಳ್ವಿಕೆಯಿಂದ ಸುಕಿ ವಾಸದವರೆಗೆ:
ಈ ಬಂಗಲೆಯ ಗೋಡೆಗಳು ಬ್ರಿಟಿಷರ ಕಾಲದ ಇತಿಹಾಸವನ್ನು ಸಾರುತ್ತವೆ. ಒಂದು ಕಾಲದಲ್ಲಿ ಬ್ರಿಟಿಷ್ ವೈಸರಾಯ್ ಲಾರ್ಡ್ ಲಿನ್ಲಿತ್ಗೊ ಅವರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದ ಸರ್ ರೆಜಿನಾಲ್ಡ್ ಮ್ಯಾಕ್ಸ್‌ವೆಲ್ ಇಲ್ಲಿ ನೆಲೆಸಿದ್ದರು. ವಿಶೇಷವೆಂದರೆ, 1960ರ ದಶಕದಲ್ಲಿ ಭಾರತದ ಮ್ಯಾನ್ಮಾರ್ ರಾಯಭಾರಿಯಾಗಿದ್ದ ಡಾವ್ ಖಿನ್ ಕಿ ಅವರ ಅಧಿಕೃತ ನಿವಾಸವೂ ಇದಾಗಿತ್ತು. ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸುಕಿ ಅವರು ಕೂಡ ಇಲ್ಲಿ ತಮ್ಮ ಬಾಲ್ಯದ ಕೆಲವು ವರ್ಷಗಳನ್ನು ಕಳೆದಿದ್ದರು.

ಇಂದಿರಾ ಕಾಲದ ಪುನಶ್ಚೇತನದ ಕೇಂದ್ರ
1977ರ ಚುನಾವಣೆಯ ಸೋಲಿನ ನಂತರ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ, ಇಂದಿರಾ ಗಾಂಧಿ ಅವರ ನೇತೃತ್ವದ ಬಣಕ್ಕೆ ಈ ಬಂಗಲೆಯೇ ಆಸರೆಯಾಯಿತು. ಅಂದಿನ ರಾಜ್ಯಸಭಾ ಸಂಸದ ಜಿ. ವೆಂಕಟಸ್ವಾಮಿ ಅವರು ತಮ್ಮ ಈ ನಿವಾಸವನ್ನು ಪಕ್ಷದ ಚಟುವಟಿಕೆಗಳಿಗೆ ಬಿಟ್ಟುಕೊಟ್ಟಿದ್ದರು. ಅಂದಿನಿಂದ ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್ ಮತ್ತು ಡಾ. ಮನಮೋಹನ್ ಸಿಂಗ್ ಅವರ ಪ್ರಧಾನಿ ಅವಧಿಯಲ್ಲೂ ಈ ಕಚೇರಿಯು ದೇಶದ ರಾಜಕೀಯ ನಿರ್ಧಾರಗಳ ಕೇಂದ್ರಬಿಂದುವಾಗಿತ್ತು.
ಕಾನೂನು ಹೋರಾಟ?
ಪಕ್ಷದ ಹಿರಿಯ ನಾಯಕರು ಈ ಕಚೇರಿಯೊಂದಿಗೆ ಗಾಢವಾದ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ. ಹಠಾತ್ ತೆರವು ಸೂಚನೆಯಿಂದಾಗಿ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿದ್ದು, ಸ್ವಲ್ಪ ಕಾಲಾವಕಾಶ ಅಥವಾ ವಿನಾಯಿತಿ ಪಡೆಯಲು ಪಕ್ಷವು ಕಾನೂನು ತಜ್ಞರ ಮೊರೆ ಹೋಗಲು ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ತಮಿಳುನಾಡು ಚುನಾವಣೆ – AIADMK ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್, ಎಡಪ್ಪಾಡಿಯಲ್ಲಿ EPS ಕಣಕ್ಕೆ?



















