ಬೆಂಗಳೂರು : ಕಸ ಹಾಕಿ ಬರುವುದಾಗಿ ಮನೆಯಿಂದ ಹೊರಗೆ ಹೋಗಿದ್ದ ಮಹಿಳೆ ಪ್ರಿಯಕರನ ಜತೆ ಪರಾರಿಯಾಗಿರುವ ಘಟನೆ ನಗರದ ಬಾಗಲಗುಂಟೆಯಲ್ಲಿ ನಡೆದಿದೆ. ಗಂಡ, ಇಬ್ಬರ ಮಕ್ಕಳನ್ನು ಬಿಟ್ಟು ಪತ್ನಿ ಪರ ಪುರುಷನ ಜತೆ ಓಡಿ ಹೋಗಿದ್ದಾಳೆ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶರತ್ ಕುಮಾರ್ ಎಂಬುವವರ ಪತ್ನಿ ಪ್ರಿಯಾಂಕಾ ಪರಾರಿಯಾದ ಮಹಿಳೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಬಾಗಲಗುಂಟೆಯಲ್ಲಿ ವಾಸವಾಗಿದ್ದರು. ಕಸ ಹಾಕಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಪರಪುರುಷನೊಂದಿಗೆ ಪರಾರಿಯಾಗಿದ್ದಾಳೆ. ನಾನು ಮನೆಯಲ್ಲಿರುವಾಗಲೇ ಪ್ರಿಯಾಂಕಾ ತನ್ನ ಪ್ರಿಯಕರ ಪ್ರಭು ಜತೆ ಹೋಗಿದ್ದಾಳೆ. ಅಷ್ಟೇ ಅಲ್ಲದೆ, ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಪರಾರಿಯಾಗಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.
ನಾನು ಕೆಲಸಕ್ಕೆ ಹೋದ ಸಮಯದಲ್ಲಿ ಏರಿಯಾದಲ್ಲಿ ಕಟ್ಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನನ್ನು ಭೇಟಿಯಾಗುತ್ತಿದ್ದಳು. ಜತೆಗೆ ಪ್ರಭು ಪ್ರಿಯಾಂಕಾಗೆ ಮೊಬೈಲ್ ಕರೆನ್ಸಿ ಹಾಕಿಸುತ್ತಿದ್ದ. ಇದೇ ವಿಚಾರಕ್ಕಾಗಿ ನಮ್ಮ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪತಿ ಶರತ್ ಪ್ರಿಯಾಂಕಾಗೆ ಹೀಗೆಲ್ಲ ಮಾಡಬೇಡ ಎಂದು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ್ದರು. ಆದರೆ ಏ.11ರ ರಾತ್ರಿ ಪ್ರಿಯಾಂಕಾ ಮನೆ ಬಿಟ್ಟು ಹೋಗಿದ್ದಾಳೆ. ಮಧ್ಯರಾತ್ರಿ ಕಸ ಎಸೆದು ಬರುವುದಾಗಿ ಮನೆಯಿಂದ ಕಸದ ಬಕೆಟ್ ಹಿಡಿದು ಹೊರಟಿದ್ದಾಳೆ. ಮೊದಲೇ ರೆಡಿ ಮಾಡಿ ಇಟ್ಟಿದ್ದ ಬಟ್ಟೆ ಬ್ಯಾಗ್‌ನ್ನು ಮನೆಯಲ್ಲಿನ ಪತಿ, ಮಕ್ಕಳಿಗೆ ಕಾಣದಂತೆ ಕಸದ ಜತೆ ಬ್ಯಾಗ್ ಸಮೇತ ಹೊರಗೆ ಬಂದಿದ್ದಾಳೆ.
ಒಂದು ಕೈಯಲ್ಲಿ ಕಸದ ಬಕೆಟ್ ಮತ್ತು ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದು ಹೊರಟಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ರಾವ್ಗೆ ಬಿಗ್ ರಿಲೀಫ್!



















